ಉಡುಪಿ: ಸರಳೀಕೃತ ಭೂಪರಿವರ್ತನೆ ಕಾಯಿದೆ ಅಳವಡಿಸಲು ಅಧಿಕಾರಿ ವರ್ಗ ನಿರಾಸಕ್ತಿ

ಉಡುಪಿ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಸರಳೀಕೃತ ಭೂಪರಿವರ್ತನೆ ಕಾಯಿದೆ ಅಳವಡಿಸಲು ದೇವರು ಕೊಟ್ಟರೂ ಪೂಜಾರಿ ಬಿಡಾ ಎನ್ನುವಂತಾಗಿದೆ ಉಡುಪಿ ಜಿಲ್ಲೆಯ ಅಧಿಕಾರಿ ವರ್ಗದ ಕಾರ್ಯವೈಖರಿ.

ಸರಳೀಕೃತ ಭೂಪರಿವರ್ತನೆ ಕಾಯಿದೆ ಜಾರಿಗೆ ಉಡುಪಿ ಜಿಲ್ಲೆಯಲ್ಲಿ ಅಧಿಕಾರಿ ವರ್ಗವೇ ನಿರಾಸಕ್ತಿ ತೋರುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಭೂಪರಿವರ್ತನೆಗೆ ಅಗತ್ಯವಿಲ್ಲದಿದ್ದರೂ ಹಲವು ದಾಖಲೆಗಳನ್ನು ನೀಡಬೇಕೆಂದು ಅಧಿಕಾರಿಗಳು ಜನರಿಗೆ ಸತಾಯಿಸುತ್ತಿದ್ದಾರೆ. ಗ್ರಾಮಕರಣಿಕರು ಈಗಾಗಲೇ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಕಛೇರಿಯಲ್ಲಿ ಅವರು ಸಿಗುವುದೇ ಅಪರೂಪವಾಗಿದೆ.

ಆದಾಗ್ಯೂ ಭೂಪರಿವರ್ತನೆ ಕೋರುವ ಜಮೀನಿಗೆ ಗ್ರಾಮಕರಣಿಕರ ವರದಿ ಮತ್ತು ಅಪೇಕ್ಷಿತ ಜಮೀನಿನಲ್ಲಿ ಮಾಲಿಕರ ಜೊತೆ ನಿಂತು ಗ್ರಾಮಕರಣಿಕರು ಫೋಟೋ ತೆಗೆಯಬೇಕೆಂದು ಹೇಳುತ್ತಾರೆ.ಇದು ಕೂಡ ಸರಕಾರಿ ಆದೇಶದಲ್ಲಿ ಇಲ್ಲದಿದ್ದರೂ ಇದಕ್ಕಾಗಿ ಸುಮ್ಮನೆ ಸಮಯ ವ್ಯರ್ಥ, ಕೆಲಸ ಕಾರ್ಯ ಬಿಟ್ಟು ಗ್ರಾಮಕರಣಿಕರನ್ನು ಕಾಯುತ್ತಾ ಕೂರಬೇಕಾದ ಅನಿವಾರ್ಯತೆ.

ಹತ್ತು ಹಲವು ದಾಖಲೆಗಳನ್ನು ಪಡೆದು ಜಮೀನನ್ನು ಭೂಪರಿವರ್ತನೆ ಮಾಡಬೇಕಾದರೆ ತಿಂಗಳಾನುಗಟ್ಟಳೆ ಕಾಯಬೇಕಾದ ಪರಿಸ್ಥಿತಿ. ಸಾರ್ವಜನಿಕರು ಇದರಿಂದಾಗಿ ದಳ್ಳಾಳಿಗಳ ಮೊರೆಹೋಗಬೇಕಾಗಿ ಬರುತ್ತದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸರಳೀಕೃತ ಭೂಪರಿವರ್ತನೆ ಆದೇಶವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!