ದೈವ ಗುಳಿಗನಿಗೆ ಅವಮಾನ- ತುಳುನಾಡಿನ ಜನರು ಸಹಿಸಲಾರರು: ರಮೇಶ್ ಕಾಂಚನ್

ಉಡುಪಿ: ಸಭೆಯೊಂದರಲ್ಲಿ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ತುಳುನಾಡಿನ ಆರಾಧ್ಯ ದೈವವಾದ ಗುಳಿಗನಿಗೆ ಅವಮಾನ ಮಾಡಿದ್ದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಬಿಜೆಪಿ ಪಕ್ಷದ ಶಾಸಕರು, ಸಚಿವರು ಹಾಗೂ ಹಲವಾರು ನಾಯಕರು ತುಳು ಭಾಷೆ, ತುಳು ಸಂಸ್ಕೃತಿಯನ್ನು ಹೀಯಾಳಿಸುತ್ತ ಬಂದಿದ್ದಾರೆ. ಹಲವು ದಿನಗಳ ಹಿಂದೆ ಅಧಿವೇಶನದಲ್ಲಿ ಕಾನೂನು ಸಚಿವರಾದ ಮಾಧುಸ್ವಾಮಿ ಅವರು ತುಳು ಭಾಷೆಯನ್ನು ಅವಮಾನ ಮಾಡಿದ್ದನ್ನು ನೋಡಿದ್ದೇವೆ.

ಸಭೆಯೊಂದರಲ್ಲಿ ಸಿ.ಟಿ ರವಿ ಅವರು ಪಂಜುರ್ಲಿ ಹಾಗೂ ಗುಳಿಗ ದೈವಗಳು ತಮ್ಮ ಪಕ್ಷದ ಪರ ಇದ್ದಾರೆ ಎಂದು ಹೇಳಿದ್ದನ್ನು ನೋಡಿದ್ದೇವೆ.ಬಿಜೆಪಿ ಪಕ್ಷದ ನಾಯಕರಿಗೆ ಹಿಂದೂ ಧರ್ಮ ಎಂಬುದು ಕೇವಲ ಚುನಾವಣೆಯ ಅಸ್ತ್ರವಾಗಿದೆ. ಚುನಾವಣೆಯ ಸಮಯದಲ್ಲಿ ನಾವು ಹಿಂದೂ ಧರ್ಮದ ರಕ್ಷಣೆಗಾಗಿ ಬಂದವರು ಎಂದು ಬೊಗಳೆ ಬಿಡುವ ಇವರು ಬೇರೆ ಸಂದರ್ಭಗಳಲ್ಲಿ ಧರ್ಮದ ಬಗ್ಗೆ ತುಚ್ಛವಾಗಿ ಮಾತನಾಡಿಕೊಳ್ಳುತ್ತಾರೆ.

ಮಾನ್ಯ ಅರಗ ಜ್ಞಾನೇಂದ್ರ ಅವರೇ, ತುಳುನಾಡಿನಲ್ಲಿ ಹುಟ್ಟಿದ ನಾವು ಧನ್ಯರು. ಇಲ್ಲಿನ ದೈವಗಳಿಗೆ ಅಪಾರ ಶಕ್ತಿ ಇದೆ. ನಿಮ್ಮ ರಾಜಕೀಯ ತೆವಲಿಗೆ ನಮ್ಮ ದೈವಗಳ ವಿಷಯವನ್ನು ಬಳಸಬೇಡಿ. ತುಳುನಾಡಿನ ಜನರು ನಿಮ್ಮ ಈ ಕಪಟ ಧರ್ಮ ಪ್ರೇಮವನ್ನು ಅರಿತು ಕೊಂಡಿದ್ದಾರೆ.

ಜನರಿಗೆ ನೀಡಿದ ಆಶ್ವಾಸನೆಯನ್ನು ಮೊದಲು ಈಡೇರಿಸಿ ಜೊತೆಗೆ ದೈವಾರಾಧಕರಿಗೆ ತಾವು ಮಾಸಿಕವಾಗಿ ರೂ. 2000 ನೀಡುತ್ತೇವೆ ಎಂದು ಘೋಷಿಸಿರುವ ಯೋಜನೆಯನ್ನು ಮೊದಲು ನೀಡಿ. ಕರಾವಳಿ ಭಾಗದಲ್ಲಿ ಅತ್ಯಂತ ಪೂಜನೀಯವಾಗಿ ಆರಾಧಿಸುವಂತ ದೈವಗಳ ಬಗ್ಗೆ, ದೈವಾರಾಧನೆ ಬಗ್ಗೆ, ತುಳು ಭಾಷೆಯ ಬಗ್ಗೆ ಮಾತನಾಡುವುದ್ದನ್ನು ನಿಲ್ಲಿಸಿ. ಗುಳಿಗ ದೈವದ ಬಗ್ಗೆ ಲಘುವಾಗಿ ಮಾತನಾಡಿದ ನೀವು ತಕ್ಷಣ ಕ್ಷಮೆಯಾಚಿಸಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಜನರು ನಿಮ್ಮ ಈ ಕಪಟ ಧರ್ಮ ಪ್ರೇಮಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!