ಎಲ್ಲಾ ಪಕ್ಷಗಳು ಪ್ರಣಾಳಿಕೆಯಲ್ಲಿ ಯುವ ಸಬಲೀಕರಣಕ್ಕೆ ಆದ್ಯತೆ ನೀಡಿ- ಸೋಲಿಡಾರಿಟಿ ಕರ್ನಾಟಕ
ಬೆಂಗಳೂರು : ಸೋಲಿಡಾರಿಟಿ ಯೂತ್ ಮೂವ್’ಮೆಂಟ್ ಕರ್ನಾಟಕದ ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟು ಕೊಂಡು ಯುವ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಮಾನವ ಸಂಪನ್ಮೂಲದಲ್ಲಿ ಯುವ ಸಮೂಹವು ಒಂದು ಪ್ರಮುಖ ವಿಭಾಗವಾಗಿದೆ. ರಾಜ್ಯದ ಜನ ಸಂಖ್ಯೆಯಲ್ಲಿ ಸರಿ ಸುಮಾರು 60% ಯುವಕ/ಯುವತಿಯರಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ರೀಡೆ ಕಲೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವ ಸಮುದಾಯ ಅತ್ಯಂತ ಸಕ್ರಿಯವಾಗಿದೆ. ಆದ್ದರಿಂದ ಯುವಕರನ್ನು ಮತ್ತು ಅವರ ಚಿಂತನೆಗಳನ್ನು ಸಮರ್ಪಕವಾಗಿ ಸದುಪಯೋಗಿಸುವುದರಿಂದ ರಾಜ್ಯವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ. ಇಂದು ರಾಜ್ಯದಲ್ಲಿ ಯುವಕ/ಯುವತಿಯರು ಹಲವಾರು ಸಾಮಾಜಿಕ, ಆಂತರಿಕ ಮತ್ತು ಆರೋಗ್ಯಕರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೋಮು ಗಲಭೆ, ಮಾದಕ ವ್ಯಸನ, ಕೊಲೆ, ಸುಲಿಗೆ, ದರೋಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ಹಾಳುಗೆಡಹುತ್ತಾರೆ. ಖಿನ್ನತೆ ಮತ್ತು ಆತ್ಮಹತ್ಯೆಯಂತ ಪ್ರಕರಣದಲ್ಲಿ ಯುವ ಸಮೂಹದ ಸಂಖ್ಯೆ ಶೇಕಡಾವಾರು ಹೆಚ್ಚಾಗುತ್ತಿದೆ. ಇದಕ್ಕೆ ನಿರುದ್ಯೋಗ ಮತ್ತು ಶೈಕ್ಷಣಿಕ ನೆರವಿನ ಕೊರತೆಯು ಪ್ರಮುಖ ಕಾರಣವಾಗಿದೆ. ಅವರನ್ನು ಸ್ವಾವಲಂಬಿಗಳನ್ನಾಗಿ ಸುವುದು ಹಾಗೂ ಸಾಮಾಜದ ಮತ್ತು ಪರಿಸರದ ಬಗ್ಗೆ ಕಾಳಜಿ ಉಂಟಾಗುವ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುವುದು, ಕಲೆ ಸಾಹಿತ್ಯ ಸಾಂಸ್ಕೃತಿಕ ರಂಗದಲ್ಲಿ ಹೆಚ್ಚಾಗಿ ತೊಡಗಿಸುವಂತೆ ಮಾಡುವ ಯೋಜನೆಗಳನ್ನು ಸರ್ಕಾರ ರೂಪಿಸುವುದು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಸಾಲಿಡಾರಿಟಿ ಯೂಥ್ ಮೂವ್’ಮೆಂಟ್-ಕರ್ನಾಟಕ ಮುಂಬರುವ 2023 ರ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಯುವಕರ ಸಬಲೀಕರಣಕ್ಕಾಗಿ ನಾಲ್ಕು ಪ್ರಮುಖ ವಿಷಯಗಳಲ್ಲಿ ಚುನಾವಣಾ ಪ್ರಣಾಳಿಕೆ ಸಿದ್ದಪಡಿಸಿರುತ್ತದೆ.
ಪ್ರಮುಖ ಬೇಡಿಕೆಗಳು :
ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪೋರೇಟ್ ಕಂಪೆನಿಗಳಲ್ಲಿ ಸ್ಥಳೀಯ ಯುವಕ/ಯುವತಿಯರಿಗೆ ಶೇಕಡಾ 50 ವರೆಗೆ ವಿವಿಧ ಹುದ್ದೆಗಳಲ್ಲಿ ಅವಕಾಶ ನೀಡುವ ನೀತಿಯನ್ನು ರೂಪಿಸಬೇಕು.
• ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿ ವರ್ಷ ಸರಕಾರದ ಮುತುವರ್ಜಿಯಿಂದ ಬೃಹತ್ “ಉದ್ಯೋಗ ಮೇಳ” ಗಳನ್ನು ಆಯೋಜಿಸಬೇಕು.
• ಉದ್ಯೋಗ ಅವಕಾಶಗಳಿಗಾಗಿ ರಾಜ್ಯದ ಯುವಜನತೆಯನ್ನು ಸಜ್ಜುಗೊಳಿಸಲು ವಿವಿಧ ಜಿಲ್ಲೆಗಳಲ್ಲಿ ಕೌಶಲ ಕೇಂದ್ರಗಳನ್ನು ಸ್ಥಾಪಿಸಬೇಕು.
• ಹೊಸದಾಗಿ ಪದವೀಧರರಾದ ಯುವಕರಿಗೆ ಸ್ಟಾರ್ಟಪ್ ಗಾಗಿ ವಿಶೇಷ ತ್ವರಿತ ಸಾಲ ಸೌಲಭ್ಯ ಮತ್ತು ಪ್ರೋತ್ಸಾಹ ಧನಕ್ಕಾಗಿ ಅನುದಾನ ಬಿಡುಗಡೆಗೊಳಿಸ ಬೇಕು. ಸ್ವ ಉದ್ಯೋಗಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.
•ಪ್ರತಿಯೊಂದು ಗ್ರಾಮದಲ್ಲಿ ಯುವಕ ಮಂಡಲಗಳನ್ನು ಸ್ಥಾಪಿಸಬೇಕು. ಕ್ರೀಡಾ ಸಲಕರಣೆಗಳನ್ನು ಉಚಿತವಾಗಿ ನೀಡಬೇಕು.
• ಕರ್ನಾಟಕದಲ್ಲಿ ಕೇವಲ ಒಂದು ಕ್ರೀಡಾಂಗಣ (ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು) ಮಾತ್ರ ಪೂರ್ಣ ಪ್ರಮಾಣದ ಅಂತರಾಷ್ಟ್ರೀಯ ಕ್ರಿಕೇಟ್ ಆಯೋಜಿಸಲು ಯೋಗ್ಯವಾಗಿದೆ. ಕರಾವಳಿ ಪ್ರದೇಶದಲ್ಲಿ ಯುವಕರು ಹೆಚ್ಚಾಗಿ ಕ್ರಿಕೆಟ್ ಮತ್ತು ಫುಟ್ಬಾಲ್ ಕ್ರೀಡೆಯ ಕಡೆಗೆ ಒಲವು ಹೊಂದಿರುವು ದರಿಂದ ಮಂಗಳೂರು ಕೇಂದ್ರವಾಗಿಟ್ಟು ಕೊಂಡು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸ ಬೇಕು. (ಇದೀಗಾಗಲೇ ಈ ಯೋಜನೆ ಜಾರಿಯಲ್ಲಿರುವ ಕಾರಣ ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಬೇಕು)
• ಪ್ರತಿಯೊಂದು ಕ್ಷೇತ್ರದಲ್ಲೂ ಸಾರ್ವಜನಿಕ ಕ್ರೀಡಾಂಗಣ, ಸ್ವಿಮ್ಮಿಂಗ್ ಫೂಲ್, ಪಾರ್ಕ್ ನಿರ್ಮಿಸುವುದು. ಧಾರವಾಡ, ಹೆಜಮಾಡಿ, ತುಮಕೂರು, ಮಂಗಳೂರು, ಬೆಂಗಳೂರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಥಗಿತಗೊಂಡಿರುವ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಪೆವಿಲಿಯನ್, ಈಜುಕೋಳ, ಕೋರ್ಟು ಇತ್ಯಾದಿಗಳ ಕಾಮಗಾರಿ ಶೀಘ್ರದಲ್ಲಿ ಪೂರ್ತಿಗೊಳಿಸಬೇಕು
• ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ನೀಡುವ ದೇಣಿಗೆ ರೂಪದ ಅನುದಾನದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕು. ಖ್ಯಾತ ಸಾಹಿತಿ ಪ್ರೋ. ಎಸ್ ಜಿ ಸಿದ್ಧರಾಮಯ್ಯರ ಬೇಡಿಕೆಯಂತೆ ಸಾಂಸ್ಕೃತಿಕ ಪರಿಶೀಲನಾ ಸಮಿತಿ ರಚಿಸಬೇಕು
• ಸಿನಿಮಾ ರಂಗದಲ್ಲಿ ಹೊಸ ಯುವಕರು ಪಾದಾರ್ಪಣೆಗೆಯ್ಯುತ್ತಿರುವುದು ಇಂದಿನ ವಿಶೇಷತೆ. ನ್ಯೂ ಜನರೇಷನ್ ಸಿನಿಮಾ ಕಾಲದ ಬೇಡಿಕೆಯಾಗಿದ್ದು ಹೊಸ ಅಭಿರುಚಿಯ ಸಿನಿಮಾಗಳೊಂದಿಗೆ ಯುವಕರು ಬರುತ್ತಿದ್ದಾರೆ. ಆದ್ದರಿಂದ ಯುವಕರಿಗೆ ಸಿನಿಮಾ/ಕಿರು ಚಿತ್ರ ನಿರ್ದೇಶಿಸಲು ವಿಶೇಷ ಸಾಲ ಸೌಲಭ್ಯ ಒದಗಿಸುವ ಬಗ್ಗೆ ಆಲೋಚಿಸಬೇಕು. ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಯುವ ಸಿನಿಮಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಇದೀಗಾಗಲೇ ಘೋಷಣೆಯಾದ ಚಿತ್ರನಗರಿಯ ಕಾಮಗಾರಿ ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಬೇಕು.
• ಇಂದು ರಾಜ್ಯದ ಯುವಕ/ಯುವತಿಯರಲ್ಲಿ 18% ಜನ ಒಂದಲ್ಲಾ ಒಂದು ರೀತಿಯ ಕೌಟುಂಬಿಕ ಅಥವಾ ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಅವರಲ್ಲಿ ಕೆಲವರು ಆತ್ಮಹತ್ಯೆಯ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಇದು ರಾಜ್ಯದ ದೊಡ್ಡ ಸಮಸ್ಯೆಯಲ್ಲೊಂದು. ಕೋವಿಡ್ ನಂತರ ಇದರ ಪ್ರಮಾಣ ಹೆಚ್ಚಾಗುತ್ತಿದೆ. ವಿವಿಧ ಕಾರಣಗಳಿಂದಾಗಿ ಮಾನಸಿಕ ಖಿನ್ನತೆಯನ್ನು ಎದುರಿಸುತ್ತಿರುವ ಯುವಕ/ಯುವತಿಯರಿಗಾಗಿ ಪ್ರತಿಯೊಂದು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಕೌನ್ಸೆಲಿಂಗ್ ಸೆಂಟರ್ ತೆರೆಯಬೇಕು. ಮಾತ್ರವಲ್ಲದೆ, ಅದು ಇನ್ನಷ್ಟು ಕಾರ್ಯನಿರ್ವಹಿಸುವಂತೆ ಯೋಜನೆಯನ್ನು ರೂಪಿಸಬೇಕು.
• ಮಾದಕ ವ್ಯಸನವು ರಾಜ್ಯದಲ್ಲಿ ಬಡತನ, ನಿರುದ್ಯೋಗ, ಭಯೋತ್ಪಾದನೆ ಮತ್ತು ಅನಾರೋಗ್ಯವನ್ನು ಹರಡಲು ಕಾರಣವಾಗುತ್ತದೆ. ಮಾದಕ ವ್ಯಸನ ನಿವಾರಣೆಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ತುತ್ತಾಗಿರುವರನ್ನು ಸರಿದಾರಿಗೆ ತರಲು ಪ್ರತಿಯೊಂದು ಕ್ಷೇತ್ರದಲ್ಲಿ ಪುನರ್ವಸತಿ ಕೇಂದ್ರಗಳನ್ನು (Rehabilitation centres) ಡಿ-ಅಡಿಕ್ಷನ್ ಸೆಂಟರ್ ಮತ್ತು ಆಪ್ತ ಸಮಾಲೋಚನಾ ಕೇಂದ್ರಗಳನ್ನು ತೆರೆಯಬೇಕು.
• ಸಣ್ಣ ಮಟ್ಟದಲ್ಲಿ ಕೃಷಿ ಆರಂಭಿಸಲು ಹಣದ ಕೊರತೆಯೂ ಹೆಚ್ಚಾಗಿರುತ್ತದೆ ಪ್ರೋತ್ಸಾಹ ಧನದ ಅಗತ್ಯತೆ ಇರುವುದರಿಂದ ಹಾಗೂ ಕೃಷಿಯ ಕಡೆಗೆ ಯುವಕರು ಹೆಚ್ಚಾಗಿ ಆಕರ್ಷಿಸಲು ವಿಶೇಷ ಅನುದಾನದ ಮೂಲಕ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಬೇಕು.
• ಯುವ ಸಮುದಾಯವು ಕೃಷಿಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ. ಆದರೂ ಸಂಪೂರ್ಣ ಮಾಹಿತಿಯ ಕೊರತೆ ಇರುತ್ತದೆ. ಮಣ್ಣಿನ ಗುಣಮಟ್ಟ, ನೀರಿನ ಪ್ರಮಾಣ, ಬಿತ್ತನೆ ಇತ್ಯಾದಿಗಳ ಬಗ್ಗೆ ವಿವರಿಸುವ ಮಾಹಿತಿ ಕೇಂದ್ರಗಳನ್ನು ತೆರೆಯಬೇಕು ಮತ್ತು ವಾರ್ಡ್ ಮಟ್ಟದಲ್ಲಿ ಕೃಷಿ ಕಾರ್ಯಾಗಾರವನ್ನು ಆಯೋಜಿಸಬೇಕು.
• ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ 40% ಉದ್ಯೋಗವನ್ನು ಆದಷ್ಟು ಬೇಗ ಭರ್ತಿ ಮಾಡಬೇಕು.
•ಶಿಕ್ಷಣವನ್ನು ಪದವಿ ವರೆಗೆ ಉಚಿತಗೊಳಿಸಬೇಕು. ಅಲ್ಪಸಂಖ್ಯಾತರ ಮತ್ತು ಕೆಲವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರಕೃತಿ ವಿಕೋಪ ಹಾಗೂ ಯುದ್ಧಗಳ ಕಾರಣದಿಂದಾಗಿ ವಿದೇಶಗಳಲ್ಲಿ ಶಿಕ್ಷಣ ಮೊಟಕುಗೊಂಡ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆಲೋಚಿಸಬೇಕು. ಸ್ಥಗಿತಗೊಂಡಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಪುನಃರಾರಂಭಿಸಬೇಕು.
• ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಆರ್ಥಿಕ ನೆರವು ನೀಡುವುದು ಮತ್ತು ಪ್ರತಿ ಜಿಲ್ಲೆಯಲ್ಲಿ ಒಂದು ಅತ್ಯಾಧುನಿಕ ತಂತ್ರಜ್ಞಾನ ಗಳನ್ನೊಳಗೊಂಡ ಗ್ರಂಥಾಲಯ ನಿರ್ಮಿಸಬೇಕು ಹಾಗೂ ಉಚಿತ ತರಬೇತಿಗಳನ್ನು ಸರ್ಕಾರದ ವತಿಯಿಂದ ಆಯೋಜಿಸಬೇಕು.
• ಯುವಕರನ್ನು ಕೋಮುವಾದಿ ಚಿಂತನೆಗಳು ಮತ್ತು ಭಯೋತ್ಪಾದನೆಗೆ ಪ್ರೇರೇಪಿಸುವ ಭಾಷಣ, ಹೇಳಿಕೆಯ ಬಗ್ಗೆ ತೀವ್ರ ನಿಗಾ ವಹಿಸಬೇಕು. ನೈತಿಕ ಪೋಲೀಸ್ ಗಿರಿಯ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೋಮು ಭಾವನೆ ಕೆರಳಿಸುವ ಮಾದ್ಯಮ ವರದಿಗಳನ್ನು ಮತ್ತು ಕಾರ್ಯಕ್ರಮಗಳನ್ನು ತಡೆಹಿಡಿಯಬೇಕು. ಕೋಮು ಸೌಹಾರ್ದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಬೇಕು.
• ಯುವ ಸಬಲೀಕರಣ ಮತ್ತು ಕ್ಷೇತ್ರಕ್ಕೆ ರಾಜ್ಯ ಬಜೆಟ್ ನಲ್ಲಿ ಶೇಕಡ 18 ಮೀಸಲಿಡಬೇಕು.
• ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಒಳಗಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂವಿಧಾನದ ಒಕ್ಕೂಟ ತತ್ವಗಳಿಗನುಗುಣವಾಗಿ ಪರಾಮರ್ಶಿಸಿ ರಾಜ್ಯದ ಅಗತ್ಯತೆ ತಕ್ಕಂತೆ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಬೇಕು.
.ಗುಂಪು ಹಲ್ಲೆ ಮತ್ತು ನೈತಿಕ ಪೋಲಿಸ್ ದಾಳಿಯ ಪ್ರಕರಣಗಳು ರಾಜ್ಯದಲ್ಲಿ ನಿರಂತರ ಹೆಚ್ಚಾಗುತ್ತಿದೆ. ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನವ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು.
.ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಸ್ಥಾಪಿಸಲಾಗಿರುವ ರಾಜ್ಯ ಮಾನವ ಹಕ್ಕುಗಳ ಆಯೋಗ ಎಸ್ ಸಿ ಮತ್ತು ಎಸ್ ಟಿ ಆಯೋಗ ಮಹಿಳಾ ಆಯೋಗ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗಗಳಿಗೆ ಸೂಕ್ತ ವ್ಯಕ್ತಿಗಳನ್ನು ನೇಮಿಸಿ, ಹೆಚ್ಚಿನ ಅನುದಾನವನ್ನು ಒದಗಿಸುವುದರ ಜೊತೆಗೆ ವಿಶೇಷ ಅಧಿಕಾರವನ್ನು ನೀಡಬೇಕು.
ಮುಂದಿನ ದಿನಗಳಲ್ಲಿ ಇವಿಷ್ಟು ವಿಷಯದ ಮೇಲೆ ಸಾಲಿಡಾರಿಟಿ ಯೂಥ್ ಮೂಮೆಂಟ್ ರಾಜ್ಯದ ಎಲ್ಲ ಕ್ಷೇತ್ರದ ಜನ ಪ್ರತಿನಿಧಿಗಳನ್ನು ಭೇಟಿಯಾಗಿ ಸರ್ಕಾರದ ಗಮನಕ್ಕೆ ತಂದು ಇದರ ಅನುಷ್ಠಾನಕ್ಕೆ ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸಲಾಗುವುದೆಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು. ಈ ಸಂದರ್ಭದಲ್ಲಿ ಲಬೀದ್ ಶಾಫಿ ರಾಜ್ಯ ಅಧ್ಯಕ್ಷರು ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಕರ್ನಾಟಕ, ರಾಜ್ಯ ಕಾರ್ಯದರ್ಶಿ ಮಹಮ್ಮದ್ ರಿಹಾನ್, ಬೆಂಗಳೂರು ನಗರ ಅಧ್ಯಕ್ಷರಾದ ಮಾಝ್ ಮನಿಯಾರ್, ಯುವ ಪ್ರಣಾಳಿಕೆ ಸಮಿತಿಯ ಸಂಚಾಲಕರಾದ ಅಶೀರುದ್ದೀನ್ ಹಾಗೂ ಕಲಾ ಸಾಹಿತ್ಯ ಸಂಘದ ಸಂಚಾಲಕರಾದ ಇಮ್ತಿಯಾಜ್ ಬೇಗ್ ಉಪಸ್ಥಿತರಿದ್ದರು.