ಪಡುಬಿದ್ರಿ: ವ್ಯವಹಾರದಲ್ಲಿ ಹಣ ತೊಡಗಿಸುವುದಾಗಿ ವ್ಯಕ್ತಿಗೆ ರೂ.3.84 ಲಕ್ಷ ವಂಚನೆ
ಪಡುಬಿದ್ರಿ ಮಾ.16(ಉಡುಪಿ ಟೈಮ್ಸ್ ವರದಿ): ಕಂಪೆನಿಯ ವ್ಯವಹಾರದಲ್ಲಿ ತೊಡಗಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಣ ಪಡೆದು 3.84 ಲಕ್ಷ ರೂ. ವಂಚಿಸಿರುವುದಾಗಿ ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಪಶ್ಚಿಮ ಬಂಗಾಳ ಮೂಲದ ಪ್ರಸ್ತುತ ಪಡುಬಿದ್ರೆಯ ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುವ ನಾರಾಯಣಚಂದ್ರ ರಾಯ್ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇವರು ಯುಪಿಸಿಎಲ್ ಅದಾನಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಕಂಪೆನಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಪರಿಚಯದ ಜಾರ್ಖಂಡ್ ಮೂಲದ ಶಿವೇಶ್ ಕುಮಾರ್ ಎಂಬಾತ ಜಾರ್ಖಾಂಡ್‌ನಲ್ಲಿದ್ದು ಕೊಂಡು ನಾರಾಯಣ ಅವರಿಗೆ QNET ಕಂಪೆನಿಯ ವ್ಯವಹಾರದಲ್ಲಿ ತೊಡಗಿಸುವುದಾಗಿ ಹಾಗೂ ಒಳ್ಳೆಯ ಲಾಭಾಂಶ ನೀಡುವುದಾಗಿ ನಂಬಿಸಿದ್ದ. ಹಾಗೂ 2020 ರ ನ.18 ರಿಂದ ಡಿ.12 ರ ವರೆಗೆ ಹಂತ ಹಂತವಾಗಿ 5,60,000 ರೂ. ಹಣವನ್ನು ಗೂಗಲ್ ಪೇ ಮತ್ತು ನೆಪ್ಟ್ ಮುಖಾಂತರ ಆಪಾದಿತನ ಖಾತೆಗೆ ವರ್ಗಾಯಿಸಿ ಕೊಂಡಿದ್ದನು. ಈ ವ್ಯವಹಾರದಲ್ಲಿ ಆಪಾದಿತನು ನಾರಾಯಣ ಅವರಿಗೆ ಅನುಪಯುಕ್ತ ವಸ್ತುಗಳನ್ನು ಕಳುಹಿಸಿ ಅದರ ಮೊತ್ತವನ್ನು ರೂಪಾಯಿ 5,94,256/- ಎಂಬುದಾಗಿ ಬಿಲ್‌ನಲ್ಲಿ ನಮೂದಿಸಿ ನಾರಾಯಣ ಅವರ ವಿಳಾಸಕ್ಕೆ ಕಳುಹಿಸಿದ್ದನು. ಈ ವಸ್ತುಗಳನ್ನು ನಾರಾಯಣ ಅವರು ಸ್ವೀಕರಿಸಿ ವಸ್ತುಗಳು ಅನುಪಯುಕ್ತ ವಸ್ತುವಾಗಿರುವುದರಿಂದಆಪಾದಿತನಿಗೆ ವಾಪಾಸು ಕಳುಹಿಸಿರುತ್ತಾರೆ. ಹಾಗೂ ಈ ಬಗ್ಗೆ ವಿಚಾರಿಸಿದಾಗ ಅಪಾದಿತನು 2022 ರ ಮಾ.4 ರಂದು ರೂ. 1,75,199 ಹಣವನ್ನು ನಾರಾಯಣ ಅವರ ಖಾತೆಗೆ ನೆಪ್ಟ್ ಮುಖಾಂತರ ಹಿಂದಿರುಗಿಸಿದ್ದಾನೆ. ಆದರೆ ಉಳಿದ 3,84,801 ರೂ.ನ್ನು ಕೇಳಿದಾಗ ಹಣವನ್ನು ವಾಪಾಸ್ಸು ನೀಡದೇ, ವ್ಯವಹಾರದಲ್ಲೂ ತೊಡಗಿಸದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.