ಅಜೆಕಾರು/ಉಡುಪಿ: ಮಟ್ಕಾ,ಇಸ್ಪೀಟ್ ಅಡ್ಡೆಗೆ ದಾಳಿ- 6 ಮಂದಿ ವಶಕ್ಕೆ
ಉಡುಪಿ ಮಾ.16(ಉಡುಪಿ ಟೈಮ್ಸ್ ವರದಿ): ಮಟ್ಕಾ ಜುಗಾರಿ ಹಾಗೂ ಇಸ್ಪೀಟು ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಅಜೆಕಾರು ಹಾಗೂ ಉಡುಪಿ ಕರಾವಳಿ ಜಂಕ್ಷನ್ ಪರಿಸರದಲ್ಲಿ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಟ್ಕಾ ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳಿಗ್ಗೆ ಖಚಿತ ಮಾಹಿತಿ ಪಡೆದ ಅಜೆಕಾರು ಪೊಲೀಸ್ ಠಾಣಾ ಪೊಲೀಸರು, ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಕೆರ್ವಾಶೆ ಪೇಟೆಯಲ್ಲಿನ ವೈನ್ ಶಾಪ್ ಬಳಿ ದಾಳಿ ಮಾಡಿ ಮಟ್ಕಾ ಜುಗಾರಿ ಆಟ ನಿರತನಾಗಿದ್ದ ಹರೀಶ ಮೂಲ್ಯ ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿಕ ಇದ್ದ ಆಟದಿಂದ ಸಂಗ್ರಹಿಸಿದ 1955 ರೂ. ನಗದು ಹಾಗೂ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಇಸ್ಪೀಟು ಜುಗಾರಿ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಕರಾವಳಿ ಜಂಕ್ಷನ್ ಸಮೀಪದ ಬಾರ್ ವೊಂದರ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ನಗರ ಪೊಲೀಸರು ದಾಳಿ ಮಾಡಿ, ಇಸ್ಪೀಟು ಜುಗಾರಿ ಆಡುತ್ತಿದ್ದ ಕಾಡಬೆಟ್ಟುವಿನ ಕಿರಣ (35), ಕುಂದಾಪುರದ ರಮೇಶ್ (34), ಬ್ರಹ್ಮಾವರದ ಪ್ರಕಾಶ್ ಶೆಟ್ಟಿ (41), ಉಡುಪಿಯ ಮಹಮ್ಮದ್ ಇಮ್ರಾನ್ (40 ), ಮೂಡೊಟ್ಟು ಗ್ರಾಮದ ಸುನೀಲ್ ಪೂಜಾರಿ ( 36 ) ಎಂಬ 5 ಮಂದಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 5,600 ರೂ. ನಗದು ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.