ಮುಂದಿನ ಸವಾಲು ಎದುರಿಸಲು ಪತ್ರಕರ್ತರು ಸಿದ್ಧರಾಗುವುದು ಅಗತ್ಯ: ಕೆ.ಪಿ.ರಾವ್
ಉಡುಪಿ, ಮಾ.15: ಬದಲಾಗುತ್ತಿರುವ ಇಂದಿನ ತಾಂತ್ರಿಕ ಯುಗದಲ್ಲಿ ಪತ್ರಕರ್ತರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದುದರಿಂದ ಮುಂದೆ ಬರುವ ಸವಾಲುಗಳನ್ನು ಎದುರಿಸಲು ಪತ್ರಕರ್ತರು ಇಂದೇ ಸಿದ್ಧರಾಗಬೇಕಾದ ಅಗತ್ಯ ಇದೆ ಎಂದು ಕೀಲಿಮಣೆ ತಜ್ಞ, ವಿಜ್ಞಾನಿ ನಾಡೋಜ ಕೆ.ಪಿ.ರಾವ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಇಂದು ಚಾಟ್-ಜಿಪಿಟಿಯಂತಹ ತಂತ್ರಜ್ಞಾನದಲ್ಲಿ ನಾವು ಇದ್ದೇವೆ. 10 ಸೆಂಕೆಂಡ್‌ನಲ್ಲಿ 500 ಪದಗಳನ್ನು ಬರೆಯುವಂತಹ ಮಟ್ಟಕ್ಕೆ ತಂತ್ರಜ್ಞಾನ ಬೆಳೆದು ನಿಂತಿದೆ. ಇಂದು ಸಾಮಾನ್ಯ ಬುದ್ದಿಮತ್ತೆಗಿಂತ ಕೃತಕ ಬುದ್ದಿಮತ್ತೆಯ ಆದ್ಯತೆ ನೀಡಲಾಗುತ್ತಿದೆ. ಇಂದರಿಂದ ಪತ್ರಕರ್ತರು ಕೆಲಸ ಕಳೆದುಕೊಳ್ಳುವ ಅಪಾಯಕ್ಕೆ ಬಂದು ತಲುಪಿದ್ದಾರೆ. ಸುಸ್ಥಿರ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ನಾಳೆ ಏನಾಗ ಬಹುದು ಎಂಬ ಸಾಮಾನ್ಯ ಕಲ್ಪನೆ ಪತ್ರಕರ್ತರಲ್ಲಿ ಮೂಡಬೇಕು ಎಂದರು.
ಇದೇ ಸಂದರ್ಭದಲ್ಲಿ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಆರಾಮ ಪಡುಬಿದ್ರಿ ಅವರನ್ನು ಸಮ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ರಜತ ಮಹೋತ್ಸವ ಸಮಿತಿ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನ ಬೈಲು, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ವಂದಿಸಿದರು. ಸದಸ್ಯ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.