ಬಿಜೆಪಿ ಬಹುಮತ ಪಡೆಯಲು ರಥಯಾತ್ರೆ ನೆರವು: ಈಶ್ವರಪ್ಪ

ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರಕಾರ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರ ನಡೆಸಲಿದೆ ಎಂದು ಮಾಜಿ ಸಚಿವ ಮತ್ತು ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.

ಉಡುಪಿ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಹಿಂದೆ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲದ ಪರಿಸ್ಥಿತಿ ಇತ್ತು. ಈಗ ಪ್ರತಿ ಕ್ಷೇತ್ರಕ್ಕೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇದು ಪಕ್ಷದ ಸದೃಢತೆ ಮತ್ತು ಬೆಳವಣಿಗೆಗೆ ಸ್ಪಷ್ಟ ಉದಾಹರಣೆ ಎಂದು ಅಭಿಪ್ರಾಯಪಟ್ಟರು.

ಹಿಂದೆ ಪಕ್ಷಕ್ಕೆ ಜನರು ಪೂರ್ಣ ಬಹುಮತ ಕೊಟ್ಟಿರಲಿಲ್ಲ. ಈ ಬಾರಿ ಸಂಪೂರ್ಣ ಬಹುಮತ ಪಡೆಯಲು ರಥಯಾತ್ರೆ ನೆರವಾಗಲಿದೆ ಎಂದು ನುಡಿದರು. ಕೇಂದ್ರದಲ್ಲಿ ಮೋದಿಜಿ ಮತ್ತಿತರ ವಿಶ್ವನಾಯಕರ ನೇತೃತ್ವ, ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ನಳಿನ್‍ಕುಮಾರ್ ಕಟೀಲ್ ಅವರ ಮೂಲಕ ಬಿಜೆಪಿ ನೇತೃತ್ವವನ್ನು ಜನತೆ ಗಮನಿಸಿದ್ದಾರೆ ಎಂದು ತಿಳಿಸಿದರು.

ಕೇಂದ್ರ- ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಲಿದ್ದೇವೆ. ಕಾಂಗ್ರೆಸ್ಸಿನ ಭ್ರಷ್ಟಾಚಾರದ ಜನರ ಮುಂದಿಡುವುದು ಬಿಜೆಪಿ ಗೆಲುವಿಗೆ ನೆರವಾಗಲಿದೆ. ತಿಹಾರ್ ಜೈಲಿಗೆ ಹೋಗಿ ಬಂದ ಡಿ.ಕೆ.ಶಿವಕುಮಾರ್, ರೀಡೂ ಮೂಲಕ ಸಿದ್ದರಾಮಯ್ಯರ ಭ್ರಷ್ಟ ಆಡಳಿತ ಸೇರಿದಂತೆ ಕಾಂಗ್ರೆಸ್ ವೈಫಲ್ಯವನ್ನು ಜನರಿಗೆ ತಿಳಿಸಲಿದ್ದೇವೆ ಎಂದು ಅವರು ತಿಳಿಸಿದರು.
ಸಚಿವರಾದ ಎಸ್.ಅಂಗರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಉಪಸ್ಥಿತರಿದ್ದರು. ಕಾಪುವಿನಲ್ಲಿ ಬೈಕ್ ರ್ಯಾಲಿ, ವಿವಿಧೆಡೆ ನಡೆದ ರೋಡ್ ಷೋದಲ್ಲಿ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಹಿರಿಯ ಮುಖಂಡ ಡಾ.ವಿ.ಎಸ್.ಆಚಾರ್ಯ ಅವರ ಪ್ರತಿಮೆಗೆ ಪಕ್ಷದ ಮುಖಂಡರು ಮಾಲಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!