ಸಿದ್ದರಾಮಯ್ಯ ಶ್ರೀ ಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ-ಈಶ್ವರಪ್ಪ
ಉಡುಪಿ ಮಾ.14(ಉಡುಪಿ ಟೈಮ್ಸ್ ವರದಿ): ಸಿದ್ದರಾಮಯ್ಯ ಅವರು ಉಡುಪಿಯ ಶ್ರೀಕೃಷ್ಣನ ಶಾಪದಿಂದಲೇ ಮುಖ್ಯಮಂತ್ರಿ ಸ್ಥಾನ ಕಳೆದು ಕೊಂಡಿದ್ದಾರೆ ಹಾಗೂ ಚಾಮುಂಡೇಶ್ವರಿ ಚುನಾವಣೆ ಸೋತಿದ್ದಾರೆ ಎಂದು ಮಾಜಿ ಸಚಿವ ಈಸ್ವರಪ್ಪ ಅವರು ಹೇಳಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಮಾತನಾಡಿದ ಅವರು, ಹಿಂದೆಲ್ಲಾ ದೇವಸ್ಥಾನದ ಬಗ್ಗೆ ಟೀಕೆ ಮಾಡುತ್ತಿದ್ದರು. ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡಿ ಸಂಭ್ರಮಿಸುತ್ತಿದ್ದರು. ಈಗ ಇದು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅನೇಕ ಬಾರಿ ಉಡುಪಿಗೆ ಬಂದರೂ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಬೇಕು ಎಂದು ಅವರಿಗೆ ಅನಿಸಿರಲಿಲ್ಲ ಭೇಟಿ ನೀಡಲೂ ಇಲ್ಲ. ಆದರೆ ಸಿದ್ಧರಾಮಯ್ಯ ಅವರಿಗೆ ಯಾಕೆ ಶ್ರೀ ಕೃಷ್ಣ ಮಠದೊಳಗೆ ಬರಬೇಕು ಎಂದು ಅನಿಸಿರಲಿಲ್ಲ ಎಂಬುದು ಗೊತ್ತಾಗಿಲ್ಲ ಎಂದರು.
ಹಾಗೂ ನೀವು ಮುಖ್ಯಮಂತ್ರಿ ಆಗಿದ್ದಾಗ ಅಂತೂ ಶ್ರೀ ಕೃಷ್ಣ ಮಠಕ್ಕೆ ಬಂದಿಲ್ಲ. ಈಗಲಾದರೂ ಉಡುಪಿ ಗೆ ಬಂದು ಶ್ರೀ ಕೃಷ್ಣ ನ ದರ್ಶನ ಮಾಡಿಕೊಂಡು ಹೋದರೆ ನಿಮಗೆ ಒಳ್ಳೆದಾಗಬಹುದು ಎಂದು ಅನಿಸುತ್ತದೆ. ನಿಮ್ಮ ಪಾಪ ಪರಿಹಾರಕ್ಕೆ ಇಲ್ಲಿಗೆ ಬಂದು ಕೃಷ್ಣ ನ ದರ್ಶನ ಮಾಡಿಕೊಂಡು ಹೋಗಿ. ಇದನ್ನು ನಿಮಗೆ ಒಳ್ಳೆದಾಗಲಿ ಎಂದು ಸ್ನೇಹಿತನಾಗಿ ಸಲಹೆ ನೀಡುತ್ತಿದ್ದೇನೆ ಅಷ್ಟೇ. ಇದನ್ನೂ ನೀವು ರಾಜಕಾರಣಕ್ಕೆ ಬೆರೆಸಿದರೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಅಝಾನ್ ವಿರುದ್ಧವಾದ ಹೇಳಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ನನ್ನ ಅಭಿಪ್ರಾಯ ವನ್ನು ಅಲ್ಲೂ ಹೇಳಿಲ್ಲ. ಇಲ್ಲೂ ಹೇಳುತ್ತಿಲ್ಲ. ಶಾಲೆಯಲ್ಲಿ ಪರೀಕ್ಷೆ ಗಳು ನಡೆಯುತ್ತಿದೆ. ನಮ್ಮ ಸಾರ್ವಜನಿಕ ಸಭೆಯೂ ನಡೆಯುತ್ತಿದೆ. ಸಾವಿರಾರು ಜನ ಸೇರಿರುವ ಸಂದರ್ಭದಲ್ಲಿ ಒಮ್ಮೆಲೆ ಅಝಾನ್ ಬಂದಾಗ ಎಷ್ಟು ತೊಂದರೆ ಆಗುತ್ತದೆ. ದಿನಕ್ಕೆ ಮೂರು ಮೂರು ಬಾರಿ ಮೈಕ್ ನಲ್ಲಿ ಅಝಾನ್ ಹಾಕೋದರಿಂದ ಹತ್ತಿರದ ಶಾಲೆಗಳ ಮಕ್ಕಳಿಗೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಹೇಳಿದ್ದೇನೆ. ಅನೇಕರಿಗೆ ಈ ಬಗ್ಗೆ ಹೇಳಬೇಕು ಎನಿಸಿದರೂ ಅವರು ಹೇಳುವುದಿಲ್ಲ. ನಾನು ಮುಲಾಜಿಲ್ಲದೆ ಇದು ತಪ್ಪು ಎಂದು ಹೇಳಿದ್ದೇನೆ ಎಂದರು.
ಹಾಗೂ ಇದು ವಿವಾದಾತ್ಮಕ ಹೇಳಿಕೆ ಎಂದು ಕೆಲವು ಪತ್ರಿಕೆಗಳಲ್ಲಿ ಬಂದಿರಬಹುದು ಬಿಟ್ಟರೆ ಇದನ್ನು ಮೆಚ್ಚಿ ಅನೇಕರು ಕರೆ ಮಾಡಿ ಇದು ವಿವಾದಾತ್ಮಕ ಹೇಳಿಕೆ ಅಲ್ಲ ಸರಿಯಾದ ಹೇಳಿಕೆ ಎಂದು ಹೇಳುತ್ತಿದ್ದಾರೆ. ಜನ ಸಾಮಾನ್ಯರ ಮನಸ್ಸಿನಲ್ಲಿ ಇರುವ ಭಾವನೆಯನ್ನು ಸ್ಪಷ್ಟವಾಗಿ ಹೇಳಿದ್ದೇನೆ ಇದು ವಿವಾದಾತ್ಮಕ ಹೇಳಿಕೆ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.