ಮಾ.17ರಿಂದ ಲಾರಿ ಮಾಲಕರಿಂದ ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ

ಬೆಂಗಳೂರು, ಮಾ.14: ರಾಜ್ಯದಲ್ಲಿ ಲಾರಿ ಮಾಲಕರಿಗೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತಿರುವ ಅವೈಜ್ಞಾನಿಕ ನೀತಿಗಳನ್ನು ಸರಕಾರವು ಹಿಂಪಡೆಯದಿದ್ದರೆ ಮಾ.17ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಲಾರಿ ಮಾಲಕರ ಹಾಗೂ ಎಜೆಂಟರ ಸಂಘವು ಎಚ್ಚರಿಕೆ ನೀಡಿದೆ. 

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಅವರು, ಲಾರಿ ಚಾಲಕರಿಗೆ ವಿಶ್ರಾಂತಿ ಕೋಣೆಗಳನ್ನು ನಿರ್ಮಾಣ ಮಾಡಿಕೊಡಬೇಕು. ಅವರ ಮಕ್ಕಳಿಗೆ ಸರಕಾರ ಪ್ರತ್ಯೇಕ ಆರ್ಥಿಕ ನೆರವನ್ನು ನೀಡಬೇಕು. ಹೆದ್ದಾರಿಗಳ ಟೋಲ್ ಸುಂಕವನ್ನು ಲಾರಿ ಮಾಲಕರ ಬದಲಾಗಿ ಸರಕಿನ ಮಾಲಕರೇ ಪಾವತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. 

ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಸಮಯವೆಂದು ದಿನದ ಹತ್ತು ಗಂಟೆಯ ಕಾಲ ಆರು ಚಕ್ರದ ವಾಹಗಳಿಗೆ ಸಂಚರಿಸಲು ಅವಕಾಶ ನೀಡುತ್ತಿಲ್ಲ. ಇದನ್ನು ಸಂಘವು ಬಲವಾಗಿ ಖಂಡಿಸುತ್ತದೆ. ಕೂಡಲೇ ಸರಕಾರವು ಆರು ಚಕ್ರದ ವಾಹನಗಳಿಗೆ ವಿಧಿಸಿರುವ ಈ ನಿಯಮವನ್ನು ರದ್ದುಪಡಿಸಬೇಕು ಎಂದು‌ ಆಗ್ರಹಿಸಿದರು.

ಸಾರಿಗೆ ಇಲಾಖೆಯು ವಾಣಿಜ್ಯ ವಾಹನಗಳಿಗೆ ರೆಟ್ರೊ ರಿಪ್ಲಕ್ಟರ್ ಟೇಪುಗಳನ್ನು ಅಳವಡಿಸುವಂತೆ ಆದೇಶಿಸಿರುವ ನಿಯಮಗಳನ್ನು ವಾಹನದ ಮಾಲಕರು ಪಾಲಿಸಲು ಸಿದ್ಧರಿರುತ್ತಾರೆ. ಆದರೆ ‘ಕ್ಯೂ ಆರ್ ಕೋಡ್’ ಆಧಾರಿತ ರಿಪ್ಲಕ್ಟರ್ ಟೇಪುಗಳನ್ನು ಸಂಘಟನೆಯು ವಿರೋದಿಸುತ್ತದೆ ಎಂದರು. 

ಹಾಗೂ ನಗರದ ವರ್ತುಲ ನೈಸ್ ರಸ್ತೆಗಳಲ್ಲಿ ಟೋಲ್‍ಗಳು ಸುಮಾರು 10 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಸುಂಕವನ್ನು ಪಡೆಯುತ್ತಿದೆ. ಇದು ಈಗಾಗಲೇ ರಸ್ತೆಗಳಿಗಾಗಿ ವೆಚ್ಚ ಮಾಡಿದಂತಹ ಹಣದೊಂದಿಗೆ ಅತಿ ಹೆಚ್ಚು ಲಾಭವನ್ನು ಪಡೆದಿರುತ್ತಾರೆ. ಆದರೂ ಟೋಲ್‍ಗಳ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಿಸಿ ಹಗಲು ದರೋಡೆ ಮಾಡಲಾಗುತ್ತಿದೆ. ಆರು ತಿಂಗಳಿನಿಂದ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಏಕಮುಖ ಸಂಚಾರದಿಂದ ವಾಹನಗಳು ಚಲಿಸುತ್ತಿವೆ. ಈ ರಸ್ತೆಗಳಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ ಕೂಡಲೇ ಸುಂಕ ಪಡೆಯುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಇನ್ನು ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ 82 ಜನ ಸಾವನ್ನಾಪ್ಪಿದ್ದಾರೆ. ಹಾಗಾಗಿ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ದ್ವಿಚಕ್ರ ಹಾಗೂ ಮಂದಗತಿಯಲ್ಲಿ ಚಲಿಸುವ ಟ್ರಾಕ್ಟರ್, ಆಟೋರಿಕ್ಷಾಗಳನ್ನು ಚಲಿಸಲು ಅನುಮತಿ ನೀಡಬಾರದು. ಈ ವಾಹನಗಳಿಗೆ ಪ್ರತ್ಯೇಕವಾಗಿ ಸರ್ವೀಸ್ ರಸ್ತೆಯಲ್ಲೇ ಓಡಾಡುವ ನಿಯಮ ತಂದು ಕಡ್ಡಾಯಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!