ಕಾರ್ಕಳದ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ: ಸುನಿಲ್ ಕುಮಾರ್

ಹೆಬ್ರಿ: ಕಾರ್ಕಳ ಕ್ಷೇತ್ರವನ್ನು ಎಲ್ಲಾ ಹಂತದಲ್ಲೂ ಎಲ್ಲರ ಸಹಕಾರದಲ್ಲಿ ಸಮಗ್ರ ಅಭಿವೃದ್ಧಿಯನ್ನು ಮಾಡಿದ್ದೇನೆ. 236 ಕಿಂಡಿ ಅಣೆಕಟ್ಟು, ಹೆಬ್ರಿ ತಾಲ್ಲೂಕು, ಹೆಬ್ರಿ ಪಾರ್ಕ್, ಸುಸಜ್ಜಿತ ಬಸ್ ನಿಲ್ದಾಣ, ಮುಂದಿನ 10 ವರ್ಷಗಳ ದೃಷ್ಟಿಯಿಂದ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿ ಸ್ವರ್ಣ ಕಾರ್ಕಳದ ಪರಿಕಲ್ಪನೆಯಲ್ಲಿ ಮಾಡಲಾಗಿದೆ. ಕರ್ಜೆಯಲ್ಲಿ 110 ಕೆವಿ ಸಾಮರ್ಥ್ಯದ ವಿದ್ಯುತ್ ಕೇಂದ್ರವನ್ನು ಮಾಡಲಾಗಿದೆ, ಅಭಿವೃದ್ಧಿ ಏನು ಎಂದು ಕಾರ್ಕಳ ಕ್ಷೇತ್ರದಲ್ಲಿ ತೋರಿಸಿಕೊಟ್ಟಿದ್ದೇನೆ, ಜನಸೇವೆಯನ್ನು ನೋಡಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.

ಅವರು ಹೆಬ್ರಿಯ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಜನತೆಗೆ ಏನೂ ಮಾಡಿಲ್ಲ. ಈಗ ಗ್ಯಾರಂಟಿ ಕಾರ್ಡ್ ಮೂಲಕ ಸುಳ್ಳು ಹೇಳುತ್ತಿದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಸಚಿವ ಸುನಿಲ್ ಕುಮಾರ್ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕೆಲಸ ಮಾಡಿ ಕಾರ್ಕಳ ಕ್ಷೇತ್ರವನ್ನು ರಾಜ್ಯದಲ್ಲೇ ಅಭಿವೃದ್ಧಿ ಹೊಂದಿದ ಕ್ಷೇತ್ರ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿಯಾದ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ, ಭಾರತಕ್ಕೆ ಗೌರವ ದೊರೆಯುವ ಕೆಲಸವನ್ನು ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ.

ಉಡುಪಿ ಜಿಲ್ಲೆಗೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯನ್ನು ಹೆಬ್ರಿಯಲ್ಲಿ ಸ್ವಾಗತಿಸಲಾಯಿತು.
ಯಾರು ಹೊಸ ವೇಷ ಹಾಕಿಕೊಂಡು ಬಂದರೂ ಜನರ ಸೇವೆಯನ್ನು ಮಾಡಿದ ಸುನಿಲ್ ಕುಮಾರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಹೇಳಿದರು.

ಜನಸೇವಕ ಸುನಿಲ್ ಕುಮಾರ್ ಅವರನ್ನು ಅತ್ಯಧಿಕ ಬಹುಮತಗಳಿಂದ ಗೆಲ್ಲಿಸಿ ಮುಖ್ಯಮಂತ್ರಿ ಯನ್ನಾಗಿ ನೋಡಿ ಎಂದು ಮಟ್ಟಾರು ರತ್ನಾಕರ ಶೆಟ್ಟಿ ಹೇಳಿದರು.
ಕಿಶೋರ್ ಕುಮಾರ್, ಮಾಜಿ ಎಂಎಲ್ ಸಿ ಪ್ರತಾಪ ಸಿಂಹ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ,
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಕಾರ್ಕಳ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ, ಹೆಬ್ರಿ ಬಿಜೆಪಿ ಅಧ್ಯಕ್ಷ ರಮೇಶ ಕುಮಾರ್ ಶಿವಪುರ, ಮುಖಂಡರಾದ ಹೆಬ್ರಿ ಸತೀಶ ಪೈ, ಮೋಹನದಾಸ ನಾಯಕ್ ಹೆಬ್ರಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಗುರುದಾಸ ಶೆಣೈ, ಮುನಿಯಾಲು ದಿನೇಶ ಪೈ, ಪ್ರಖ್ಯಾತ್ ಶೆಟ್ಟಿ, ಪ್ರಮೀಳ ಹರೀಶ್, ಕಾರ್ಕಳದ ಉಸ್ತುವಾರಿ ಬಾಹುಬಲಿ ಪ್ರಸಾದ್, ರಥಯಾತ್ರೆಯ ಉಸ್ತುವಾರಿ ದತ್ತಾತ್ರೇಯ ಪಕ್ಷದ ವಿವಿಧ ಮುಖಂಡರು, ಜಿಲ್ಲೆಯ ವಿವಿಧ ಮುಖಂಡರು ಭಾಗವಹಿಸಿದ್ದರು.
ಡಿ.ಜಿ.ರಾಘವೇಂದ್ರ ದೇವಾಡಿಗ ನಿರೂಪಿಸಿದರು. ಮುಖಂಡ ಸಿ.ಎಂ. ಪ್ರಸನ್ನ ಕುಮಾರ್ ಶೆಟ್ಟಿ ಸ್ವಾಗತಿಸಿದರು. ನಾಗೇಂದ್ರ ನಾಯ್ಕ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!