ಸಾವಿರ ಗೋವುಗಳ ದತ್ತು ಸ್ವೀಕಾರ- ಸಮಾಲೋಚನಾ ಸಭೆ
ಉಡುಪಿ: ಜಿಲ್ಲೆಯ ವಿವಿಧ ಗೋಶಾಲೆಗಳ ಸುಮಾರು ಒಂದು ಸಾವಿರ ಗೋವುಗಳನ್ನು ದತ್ತು ಸ್ವೀಕಾರ ನಡೆಸಲು ಉದ್ದೇಶಿಸಿರುವ ವಂದೇ ಗೋಮಾತರಂ ಸಂಸ್ಥೆಯ ಸಮಾಲೋಚನಾ ಸಭೆ ಅಜ್ಜರಕಾಡು ಗೋವಿಂದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಗೋಶಾಲೆಗಳಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲಾ ಗೋಶಾಲೆ ಗಳಲ್ಲಿರುವ ಒಂದು ಸಾವಿರ ಹಸುಗಳನ್ನು ವಿವಿಧ ಸಂಘಸಂಸ್ಥೆಗಳು ಸಹಿತ ಗೋಪ್ರೇಮಿಗಳು ದತ್ತು ಸ್ವೀಕಾರ ಮಾಡುವ ರೂಪುರೇಷೆಗಳ ಕುರಿತಾಗಿ ಚರ್ಚೆ ನಡೆಯಿತು.
ವಂದೇ ಗೋಮಾತರಂ ಸಾವಿರ ಗೋವುಗಳ ದತ್ತು ಸ್ವೀಕಾರ ಸಂಕಲ್ಪದ ರುವಾರಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ ಶೆಟ್ಟಿ ಅವರು ಮಾತನಾಡಿ, ಜಿಲ್ಲೆಯ ವಿವಿಧ ಗೋಶಾಲೆಗಳಲ್ಲಿ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ನಿರ್ವಹಣೆ ಕಷ್ಟಕರವಾಗುತ್ತಿದೆ. ಪ್ರತಿ ದಿನ ವಿವಿಧ ಭಾಗಗಳಲ್ಲಿ ರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಗಳಿಗೆ ಬಿಡಲಾಗುತ್ತಿದೆ. ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಗೋವುಗಳನ್ನು ದತ್ತು ಸ್ವೀಕಾರ ಮಾಡುವ ಮೂಲಕ ಗೋವಿನ ಸೇವೆಗೆ, ಗೋಶಾಲೆಗಳ ನಿರ್ವಹಣೆಗೆ ಪ್ರೋತ್ಸಾಹ ನೀಡಬೇಕು. ಗೋವಿಗೆ ನಮ್ಮ ಜಿಲ್ಲೆ ಯಲ್ಲಿ ತೊಂದರೆ ಆಗದ ರೀತಿಯಲ್ಲಿ ಕಾರ್ಯ ನಿರ್ವಹಿಸವೇಕು. ನಾವು ಒಂದಷ್ಟು ಸಮಯವನ್ನು ಗೋವಿನ ರಕ್ಷಣೆಗೆ ನೀಡಿದರೆ ನಮಗೂ ಪುಣ್ಯ ಪ್ರಾಪ್ತಿಯಾಗುತ್ತೆ. ಆಶ್ರಯ ಇಲ್ಲದೆ ಗೋವುಗಳಿಗೆ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಗೋವನ್ನು ಬೇಕಾದಷ್ಟು ನಮ್ಮ ಅಗತ್ಯೆಗೆ ಸಾಕಿದ ಆನಂತರ ಏನು ಮಾಡೋದು ಅನ್ನೋ ಯೋಚನೆ ಬರುವುದು ಸಹಜ. ಆದರೆ ಅವುಗಳ ಸಂರಕ್ಷಣೆ ಕೂಡ ಮಾಡುವಲ್ಲಿ ನಾವು ಜವಾಬ್ದಾರಿ ವಹಿಸಬೇಕು. ನಮ್ಮಲ್ಲಿ ದಾನಿಗಳ ಕೊರತೆ ಇಲ್ಲ. ಗೋವಿನ ಸೇವೆ ಅನ್ನೋದು ದೇವರಿಗೆ ಸೇವೆ ಸಲ್ಲಿಸಿದಂತೆ. ನಮ್ಮ ಮನಶಾಂತಿಗಾಗಿಯೂ ಗೋವಿನ ರಕ್ಷಣೆಗೆ ಕೈಜೋಡಿಸಬೇಕು. ಸಭೆಯಲ್ಲಿ ನಂಚಾರು ಕಾಮಧೇನು ಗೋಶಾಲೆಯ ಟ್ರಸ್ಟಿ ರಾಜೀವ ಚಕ್ಕೇರ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ವಿಜಯ ಬ್ಯಾಂಕ್ ನಿವೃತ್ತ ಎಜಿಎಂ ಉದಯ ಕುಮಾರ್ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಪದ್ಮಾ ರತ್ನಾಕರ್, ಜ್ಯೋತಿ ದೇವಾಡಿಗ, ನಿವೃತ್ತ ಶಿಕ್ಷಕ ಬೈಕಾಡಿ ದಿನಕರ ಶೆಟ್ಟಿ ನಿರೂಪಿಸಿ, ವಂದಿಸಿದರು.