ಜಡಿ ಮಳೆಯ ನಡುವೆ ವಿಟ್ಲಪಿಂಡಿ ವೈಭವ ಕಣ್ತುಂಬಿಕೊಂಡ ಭಕ್ತರು
ಉಡುಪಿ (ಉಡುಪಿ ಟೈಮ್ಸ್ ವರದಿ): ಪೊಡವಿಗೊಡೆಯ ಕೃಷ್ಣನ ನೆಲವೀಡಾದ ಉಡುಪಿಯಲ್ಲಿ ಇಂದು ಅಷ್ಟಮಿಯ ವಿಟ್ಲಪಿಂಡಿ ಸಂಭ್ರಮ. ಕೋರೊನಾ ಸಾಂಕ್ರಾಮಿಕ ರೋಗದ ನಡುವೆ ಅನೇಕ ನಿರ್ಬಂಧಗಳಿದ್ದರೂ ಕೂಡ ನೂರಾರು ಭಕ್ತರು ಕೃಷ್ಣನ ವೈಭವವನ್ನು ಕಣ್ತುಂಬಿ ಕೊಂಡರು.
ಮಧ್ಯಾಹ್ನ ಸುಮಾರು 3.30 ಸಮಯದಲ್ಲಿ ಗೊಲ್ಲರೊಡಗೂಡಿ ಕೃಷ್ಣನ ಮೃತ್ತಿಕ ಮೂರ್ತಿಯು ಪಂಚವಾದ್ಯಗಳ ಭವ್ಯ ಸ್ವಾಗತದಲ್ಲಿ ಪಲ್ಲಕ್ಕಿಯ ಮೇಲೆ ರಥಬೀದಿಯನ್ನು ಪ್ರವೇಶಿಸಿ, ಅಲಂಕೃತಗೊಂಡ ರಥವನ್ನೇರಿತು.
ಪರ್ಯಾಯ ಶ್ರೀಗಳಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಗಳ ಅಮೃತ ಹಸ್ತದಲ್ಲಿ ರಥದಲ್ಲಿದ್ದ ಕೃಷ್ಣನಿಗೆ ಆರತಿಯ ಮೂಲಕ ವಿಟ್ಲ ಪಿಂಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಂದಿನಂತೆ ಇಂದು ಯಾವುದೇ ನೂಕು ನುಗ್ಗಲಿರಲಿಲ್ಲ, ಹುಲಿವೇಷದ ತಾಸೆಯ ಸದ್ದಿರಲಿಲ್ಲ. ಆದರೆ ಬಂದಿರುವ ಭಕ್ತರಲ್ಲಿ ಮಾತ್ರ ಸಂಭ್ರಮವೋ ಸಂಭ್ರಮ.
ಗೊಲ್ಲ ವೇಷಧಾರಿಗಳು ತಮ್ಮದೇ ಶೈಲಿಯಲ್ಲಿ ನೃತ್ಯವನ್ನು ಮಾಡುತ್ತಾ ಮಡಿಕೆಗಳನ್ನು ಒಡೆದು ಸಂಭ್ರಮಿಸಿದರು . ಅಷ್ಟಮಿ ಎಂದರೆ ಹುಲಿ ವೇಷದ ಸಂಭ್ರಮ. ವೇಷಗಳ ಅಬ್ಬರ ರಥಬೀದಿಯಲ್ಲಿ ಕಾಣಿಸುತ್ತಿತ್ತು, ವೇಷ ನೋಡುವುದೇ ಜನರಿಗೆ ಒಂದು ಸಂಭ್ರಮ ವಾಗುತ್ತಿತ್ತು. ಅದರೆ ಈ ಬಾರಿ ಜಿಲ್ಲಾಡಳಿತದ ನಿರ್ದೇಶನದಂತೆ ವೇಷಗಳನ್ನು ತೊಡುವುದು ನಿಷೇಧಿಸಲಾಗಿತ್ತು . ಹಾಗಾಗಿ ಕೇವಲ ಮಠದ ಸಿಬ್ಬಂದಿಗಳು ಯಕ್ಷಗಾನದ ವೇಷ ತೊಟ್ಟು ಸಂಭ್ರಮಿಸಿದರು. ಮೆರವಣಿಗೆ ರಥಬೀದಿಯ ಸುತ್ತ ವೇದ ಘೋಷ, ಹರಿನಾಮ ಸ್ಮರಣೆಯೊಂದಿಗೆ ಸಾಗಿತು.
ಮೆರವಣಿಗೆ ಸಾಗುತ್ತಲೇ ಪರ್ಯಾಯ ತೀರ್ಥರು ಜನರಿಗೆ ಕೃಷ್ಣ ಪ್ರಸಾದವಾದ ಉಂಡೆ, ಚಕ್ಕುಲಿಗಳನ್ನು ಹ೦ಚಿದರು. ಮೆರವಣಿಗೆಯುದ್ದಕ್ಕೂ ಮಳೆ ಸುರಿಯುತ್ತಲೇ ಇತ್ತು. ರಥಬೀದಿಯಲ್ಲಿ ಮುಕುಂದನ ಮೆರವಣಿಗೆಯ ನಂತರ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡಲಾಯಿತು. ಈ ಬಾರಿ ಕೋರನ ಸಾಂಕ್ರಾಮಿಕ ರೋಗದ ಭಯದಿಂದ ಹಾಗೂ ಜಿಲ್ಲಾಡಳಿತದ ನಿಬಂಧನೆಯೊಂದಿಗೆ ಜನರು ತಮ್ಮ ತಮ್ಮ ಮನೆಯಲ್ಲಿ ಅಷ್ಟಮಿಯ ಸಂಭ್ರಮವನ್ನು ಸವಿದರು.
Shree Krishnaaya Namaha.