ಮಂಡ್ಯ: ದೇವಸ್ಥಾನದಲ್ಲಿ ಮೂವರ ಹತ್ಯೆ, 5 ಲಕ್ಷ ಪರಿಹಾರ ಘೋಷಣೆ
ಮಂಡ್ಯ (ಉಡುಪಿ ಟೈಮ್ಸ್ ವರದಿ) : ಮಂಡ್ಯ ಜಿಲ್ಲೆಯ ಗುತ್ತಲಿನ ಅರ್ಕೇಶ್ವರ ದೇವಸ್ಥಾನದಲ್ಲಿ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ಹಣವನ್ನು ಘೋಷಿಸಿದೆ.
ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರು ಹಾಗು ದೇವಾಲಯದ ಇಬ್ಬರು ಕಾವಲುಗಾರರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು ದೇವಾಲಯದಲ್ಲಿ ಮಲಗಿದ್ದ ಪ್ರಕಾಶ (34) ಆನಂದ (33) ಹಾಗೂ ಗಣಪತಿ (35) ಎಂಬುವರನ್ನು ಕೊಲೆ ಮಾಡಿದ್ದು.
ದೇವಾಲಯದಲ್ಲಿ ಕಳ್ಳತನ ನಡೆಸುವ ತಂಡದಿಂದ ವ್ಯವಸ್ಥಿತವಾಗಿ ದುಷ್ಕೃತ್ಯ ನಡೆದಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಶಾಸಕ ಎಂ.ಶ್ರೀನಿವಾಸ್, ಎಸ್ಪಿ ಕೆ.ಪರಶುರಾಮ್, ಎಎಸ್ಪಿ ಧನಂಜಯ್ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರೂ ಪರಿಶೀಲನೆ ಮುಂದುವರೆಸಿದ್ದಾರೆ.
ಸ್ಥಳಕ್ಕೆ ಸಂಸದೆ ಸುಮಲತಾ ಅಂಬರೀಶ್, ಡಿಸಿ ಡಾ.ಎಂ.ವಿ.ವೆಂಕಟೇಶ್ ಭೇಟಿ ನೀಡಿ ಅಧಿಕಾರಿಗಳು, ಕುಟುಂಬದವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಘಟನೆ ಸಂಬಂಧ ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಜೊತೆ ಚರ್ಚಿಸಿದ್ದು, ತಕ್ಷಣ ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಸೂಚಿಸಿದ್ದಾರೆ.
ಕೋಟ ಶ್ರೀನಿವಾಸ್ ಪೂಜಾರಿ ಖಂಡನೆ: ಈ ಹತ್ಯೆ ಪ್ರಕರಣಕ್ಕೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಖೇದ ವ್ಯಕ್ತಪಡಿಸಿದ್ದಾರೆ. ಮೂವರನ್ನು ಹತ್ಯೆ ಮಾಡಿ ಹುಂಡಿ ದೋಚಿಕೊಂಡು ಹೋಗಿದ್ದಾರೆ. ಇದು ಅತ್ಯಂತ ಹೇಯ ಕೃತ್ಯ, ಸರ್ಕಾರ ಈ ಘಟನೆಯನ್ನು ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಆರೋಪಿಗಳ ಶೀಘ್ರ ಬಂಧನ :ಆರೋಪಿಗಳು ಎಲ್ಲೇ ಅಡಗಿದ್ದರೂ ಅವರನ್ನು ಬಂಧಿಸುತ್ತೇವೆ, ಸಿಎಂರವರ ಗಮನಕ್ಕೂ ಈ ವಿಚಾರ ಬಂದಿದ್ದು ಸಂತ್ರಸ್ತ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ ನೀಡಲು ಹೇಳಿದ್ದಾರೆ. ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸುತ್ತೇವೆ. ನಾಳೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ಭರವಸೆ ನೀಡಿದ್ದಾರೆ.