‘ಭ್ರಷ್ಟೋತ್ಸವಕ್ಕಾಗಿ ಅಮಿತ್ ಶಾ ರಾಜ್ಯಕ್ಕೆ’- ವಿಧಾನಸೌಧವನ್ನು ವ್ಯಾಪಾರಸೌಧ ಮಾಡಿ ದಾಖಲೆ ಕೇಳುತ್ತಾರೆ-ಪ್ರಿಯಾಂಕ್ ಖರ್ಗೆ
ಬೆಂಗಳೂರು, ಮಾ 03: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲಂಚ ಸಂಕಲ್ಪ ಯಾತ್ರೆ ಮತ್ತು ಭ್ರಷ್ಟೋತ್ಸವ ಮಾಡಲೆಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಶಾಸಕನ ಪುತ್ರನ ಮನೆಯಲ್ಲಿ ಏಳೂವರೆ ಕೋಟಿ ಎಲ್ಲಿಂದ ಬಂತು? ಶಾಸಕನ ಪುತ್ರನ ಬಳಿಯೇ ಇಷ್ಟೊಂದು ದೊಡ್ಡ ಮೊತ್ತದ ಹಣ ಇದ್ದರೆ, ಇನ್ನು ಸಚಿವರು, ಅವರಿಗಿಂತ ಮೇಲಿನ ಸ್ಥಾನದಲ್ಲಿರುವವರ ಬಳಿ ಇನ್ನೆಷ್ಟು ಹಣವಿರಬಹುದು? ಪೇಸಿಎಂ ಅಭಿಯಾನವನ್ನು ನಾವು ಮಾಡಿರುವುದು ಸರಿಯಾಗಿಯೇ ಇದೆ ಎಂದು ಟಾಂಗ್ ನೀಡಿದರು.ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ಇದೊಂದು ಭ್ರಷ್ಟ ಸರ್ಕಾರ ಎಂಬ ಅಭಿಪ್ರಾಯ ಸಾರ್ವಜನಿಕರಿಂದಲೂ ವ್ಯಕ್ತವಾಗಿದೆ.
ವಿಧಾನಸೌಧವನ್ನು ವ್ಯಾಪಾರಸೌಧ ಮಾಡುತ್ತಿದ್ದಾರೆಂಬ ನಮ್ಮ ಮಾತಿಗೆ ದಾಖಲೆ ಕೇಳುತ್ತಿದ್ದರು. ಈಗ ರಾಜ್ಯದ ಜನರೇ ನೋಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.ಮೋದಿ ಮುಖ ನೋಡಿ ಮತ ಹಾಕಿ, ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಾವು ನಿಮಗೆ ನೀಡುತ್ತೇವೆಂದು ಅಮಿತ್ ಶಾ ಸಂಡೂರಿನಲ್ಲಿ ಹೇಳಿದ್ದರು. ರಾಜ್ಯದಲ್ಲಿ ಅವರ ಪಕ್ಷದ ಸರ್ಕಾರದ ಹಣೆಬರಹ ಹೇಗಿದೆ ಎಂಬುದು ಅವರಿಗೂ ಗೊತ್ತಿದೆ ಎನಿಸುತ್ತಿದೆ. ಈಗಿನ ಬೆಳವಣಿಗೆ ನೋಡಿದಾಗ ಅಮಿತ್ ಶಾ ಹಾಗೆ ಹೇಳಿರುವುದಕ್ಕೆ ಕಾರಣವೂ ಇದೆ ಎಂಬುದು ಗೊತ್ತಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.