ನನ್ನ ಬ್ರ್ಯಾಂಡ್’ನ ಮದ್ಯ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಕುಡುಕ!
ಹೈದರಾಬಾದ್ ಫೆ.28: ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ತಾನು ಕುಡಿಯುವ ಮದ್ಯದ ಬ್ರ್ಯಾಂಡ್ ನಮ್ಮ ಊರಿನಲ್ಲಿ ಸಿಗುತ್ತಿಲ್ಲ. ಅದನ್ನು ಎಲ್ಲಾ ಕಡೆ ಅದು ಸಿಗುವಂತೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಘಟನೆ ವರದಿಯಾಗಿದೆ.
ಜಿಲ್ಲಾಧಿಕಾರಿಗಳು ʼಪ್ರಜಾವಾಣಿʼ ಎಂಬ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಈ ವೇಳೆ ಜಗ್ತಿಯಾಲ್ ಜಿಲ್ಲೆಯ ಬಿ.ರಾಜೇಶ್ ಎಂಬವರ ಅರ್ಜಿಯನ್ನು ನೋಡಿದ್ದಾರೆ. ಊರಿನ ಜನರು ಕಳಪೆ ಗುಣಮಟ್ಟದ ಮದ್ಯವನ್ನು ಸೇವಿಸಿ, ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತಮ ಗುಣಮಟ್ಟದ ಮದ್ಯವನ್ನು ಖರೀದಿಸಲು ತುಂಬಾ ದೂರ ಪ್ರಯಾಣಿಸಬೇಕಾಗುತ್ತದೆ. ಆದ್ದರಿಂದ ʼಕಿಂಗ್ ಫಿಶರ್ʼ ಬ್ರ್ಯಾಂಡ್ ನ ಬಿಯರ್ ಎಲ್ಲಾ ಮದ್ಯದ ಅಂಗಡಿಗಳಲ್ಲಿ ಸಿಗುವಂತೆ ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಬಳಿಕ ಅದನ್ನು ಅಬಕಾರಿ ಇಲಾಖೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.