ಸಾಮಾಜಿಕ ನೆರವಿಗಾಗಿ ಹುಟ್ಟಿ ಸಾಂಸ್ಖೃತಿಕ ಸಂಘಟನೆಯಾದ ಸುಮನಸಾ: ಜಯಕರ ಶೆಟ್ಟಿ

ಉಡುಪಿ: ತನ್ನೂರಿನಲ್ಲಿ ಅವಘಡ ಉಂಟಾದಾಗ ಅವರ ನೆರವಿಗೆ ಸಮಾನ ಮನಸ್ಕರು ಒಟ್ಟಾಗಿ ಕಟ್ಟಿದ ಸಂಸ್ಥೆ ಸುಮನಸಾ ಇಂದು ಸಾಮಾಜಿಕ ಕಳಕಳಿಯನ್ನು ಮುಂದುವರಿಸುತ್ತಾ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆದಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಸಾಂಸ್ಕೃತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಬೇರೆ ಬೇರೆ ವಯೋಮಾನದವರು 80ಕ್ಕೂ ಅಧಿಕ ಮಂದಿ ಈ ಸಂಸ್ಥೆಯಲ್ಲಿದ್ದಾರೆ. ಇಷ್ಟೊಂದು ಶಿಸ್ತುಬದ್ಧವಾದ ತಂಡ ಮತ್ತೊಂದಿಲ್ಲ. ಈ ತಂಡದ ಶಿಸ್ತೇ ಬೇರೆಯವರಿಗೆ ಮಾದರಿ ಎಂದು ಶ್ಲಾಘಿಸಿದರು.

ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಸುಮನಸಾ ತಂಡವು ರಂಗಭೂಮಿಯ ಸಾಧಕರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. ಇಂದು ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರಿಗೆ ರಂಗಸನ್ಮಾನ ನೀಡಿರುವುದು ತುಳುಕೂಟಕ್ಕೆ ನೀಡಿದ ಗೌರವ ಎಂದು ತಿಳಿಸಿದರು.

ರಂಗ ಸನ್ಮಾನ ಸ್ವೀಕರಿಸಿದ ಗಂಗಾಧರ ಕಿದಿಯೂರು ಮಾತನಾಡಿ, ‘ತುಳುಕೂಟ ಉಡುಪಿ, ಬೈದ್ಯಶ್ರೀ ಸಂಶೋಧನಾ ಕೇಂದ್ರ ಈ ಎರಡು ಸಂಘಟನೆಗಳು ನನ್ನನ್ನು ಬೆಳೆಸಿವೆ. ಸುಮನಸಾದ ಅನೇಕ ಸದಸ್ಯರು ನನ್ನ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದವರೇ ಆಗಿದ್ದಾರೆ’ ಎಂದು ನೆನಪಿಸಿಕೊಂಡರು.

ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಶೆಟ್ಟಿ ಮಾತನಾಡಿ, ‘ಕೊಡವೂರಿನಲ್ಲಿ ಹುಟ್ಟಿರುವ ಸುಮನಸಾ ಸಂಸ್ಥೆಯು ನಗರಸಭೆ ವ್ಯಾಪ್ತಿಯಲ್ಲಿಯೇ ಇರುವುದು ನಮಗೆ ಹೆಮ್ಮೆ. ಕ್ರಿಯಾಶೀಲವಾಗಿ ತೊಡಗಿಸಿ ಕೊಂಡಿರುವ ಈ ಸಂಸ್ಥೆ ಕಳೆದ 11 ವರ್ಷಗಳಿಂದ ಬೇರೆ ಬೇರೆ ಕಲಾ ತಂಡಗಳನ್ನು ಇಲ್ಲಿಗೆ ಕರೆಸುವ ಮೂಲಕ ಆ ತಂಡಗಳನ್ನು ಪ್ರೋತ್ಸಾಹಿಸುತ್ತದೆ. ಜತೆಗೆ ಇಲ್ಲಿನವರಿಗೆ ಹೊಸ ರಂಗಪ್ರಯೋಗಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ’ ಎಂದರು.

ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್‌, ಉದ್ಯಮಿ ಹರೀಶ್ಚಂದ್ರ ಕೊಡವೂರು, ಸುಮನಸಾ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಉಪಾಧ್ಯಕ್ಷ ವಿನಯ್‌ ಕಲ್ಮಾಡಿ ಉಪಸ್ಥಿತರಿದ್ದರು.

ಯೋಗೀಶ್‌ ಕೊಳಲಗಿರಿ ಸ್ವಾಗಸಿದರು. ಜೀವನ್‌ ಕುಮಾರ್‌ ವಂದಿಸಿದರು. ಪ್ರವೀಣ್‌ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ರಂಗ ಪ್ರತಿಷ್ಠಾನದಿಂದ ‘ದಾಟ್ಸ್‌ ಆಲ್‌ ಯುವರ್‌ ಆನರ್‌’ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

error: Content is protected !!