ಮಾ.1 ರಿಂದ ರಾಜ್ಯಾದ್ಯಂತ ಸರ್ಕಾರಿ ಶಾಲಾ-ಕಾಲೇಜುಗಳು ಬಂದ್ ಬಂದ್?
ಬೆಂಗಳೂರು: 7ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಕರೆ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರಿ ಶಾಲಾ ಶಿಕ್ಷಕರು ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿಯೇ ಇದ್ದು ಮುಷ್ಕರದಲ್ಲಿ ಭಾಗಿಯಾಗುವಂತೆ ಷಡಕ್ಷರಿ ಸೂಚಿಸಿದ್ದಾರೆ.
ಈ ನಿಟ್ಟಿನಲ್ಲಿ ನಾಳೆ ಶಾಲಾ ಶಿಕ್ಷಕರು ಮುಷ್ಕರದಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ರಾಜ್ಯಾದ್ಯಂತ ಶಾಲೆಗಳು ಬಂದ್ ಆಗುವ ಸಾಧ್ಯತೆ ಇದೆ. ವೇತನ ಪರಿಷ್ಕರಣೆಗೆ ಆಗ್ರಹಿಸಿ, 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಾಳೆಯಿಂದ ಅನಿರ್ದಿಷ್ಟಾವಧಿಗೆ ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸಲಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಪ್ರಸ್ತಾಪ ಮಾಡಿಲ್ಲ, ಇದನ್ನು ಖಂಡಿಸಿ ಹೊಸ ಪಿಂಚಣಿ ನೀತಿ(NPS) ರದ್ಧತಿಗೆ ಆಗ್ರಹಿಸಿ 5.11 ಲಕ್ಷ ನೌಕರರು ನಾಳೆಯಿಂದ ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ನಡೆಸಲಿದ್ದಾರೆ.
ಇದರಿಂದ ಶಾಲೆ-ಕಾಲೇಜು, ತ್ಯಾಜ್ಯ ವಿಲೇವಾರಿ, ಕಂದಾಯ ಮತ್ತು ಆರೋಗ್ಯ ಸೇವೆಗಳಲ್ಲಿ ವ್ಯತ್ಯಯವುಂಟಾಗಲಿದೆ. ನೌಕರರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಗ್ರಾಮ ಪಂಚಾಯತಿ ಸಿಬ್ಭಂದಿ, ನಗರ ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಕಾಯಂ ಪೌರ ಕಾರ್ಮಿಕರು, ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಬೆಂಬಲ ಸೂಚಿಸಿದ್ದಾರೆ. ಗ್ರಾಮ ಲೆಕ್ಕಿಗರಿಂದ ಹೆಚ್ಚುವರಿ ಜಿಲ್ಲಾಧಿಕಾರಿಯವರೆಗೆ ಸಿಬ್ಬಂದಿ ಕರ್ತವ್ಯಕ್ಕೆ ಗೈರುಹಾಜರಾಗುತ್ತಿದ್ದು, ಬಹುತೇಕ ಸೇವೆಗಳು ವ್ಯತ್ಯಯವಾಗಲಿದೆ.
ಯಾವುದೆಲ್ಲ ಲಭ್ಯ, ಯಾವುದು ವ್ಯತ್ಯಯ? ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ, ಒಳರೋಗಿಗಳ ಆರೈಕೆ ಸೇವೆಗಳು ದೊರಕುತ್ತವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಮುಷ್ಕರ ನಡೆಸಲಿದ್ದಾರೆ. ಬಸ್ ಗಳ ಸಂಚಾರ ಎಂದಿನಂತಿರುತ್ತದೆ. ವಿವಿಗಳಲ್ಲಿ ತರಗತಿಗಳು ಎಂದಿನಂತೆ ನಡೆಯಲಿವೆ.
ಕಸ ಸಂಗ್ರಹದಲ್ಲಿ ವ್ಯತ್ಯಯ, ಶಾಲಾ-ಕಾಲೇಜುಗಳು ಬಂದ್, ಹೊರ ರೋಗಿಗಳ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲಭ್ಯ, ಆಸ್ತಿ ನೋಂದಣಿ ಸ್ಥಗಿತ, ತಹಶೀಲ್ದಾರ್ ಕಚೇರಿ ಬಂದ್, ಅಹವಾಲು ಸಲ್ಲಿಕೆ ಸೇವೆಗಳಿಗೆ ವ್ಯತ್ಯಯವುಂಟಾಗಲಿದೆ.
ಮುಷ್ಕರ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ, ನೌಕರರು ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಧರಣಿ, ಸರ್ಕಾರದ ವಿರುದ್ಧ ಘೋಷಣೆ ಕೂಗುವಂತಿಲ್ಲ ಎಂದು ನೌಕರರ ಸಂಘ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.