ಉ.ಪ್ರದೇಶ: ಹತ್ಯೆ ಕೇಸ್ ಪ್ರಮುಖ ಆರೋಪಿಯ ಎನ್’ಕೌಂಟರ್, ಇಬ್ಬರು ಎಸ್ಕೇಪ್
ಪ್ರಯಾಗ್‌ರಾಜ್: ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರನ್ನು ಫೆ.24 ರಂದು ಗುಂಡಿಕ್ಕಿ ಹತ್ಯೆಗೈದ ಆರೋಪಿಗಳಲ್ಲಿ ಒಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಇಂದು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಪ್ರತ್ಯಕ್ಷದರ್ಶಿ ಉಮೇಶ್ ಪಾಲ್ ಅವರ ಮೇಲೆ ದಾಳಿ ಮಾಡಲು ದಾಳಿಕೋರರು ಬಳಸಿದ ಬಿಳಿ ಬಣ್ಣದ ಎಸ್‌ಯುವಿ ಚಾಲಕ ಅರ್ಬಾಜ್‌ನನ್ನು ಗುಪ್ತಚರ ಮಾಹಿತಿಯ ನಂತರ ಪೊಲೀಸ್ ತಂಡಗಳು ಧೂಮಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರೂ ಪಾರ್ಕ್‌ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುತ್ತುವರೆದಿತ್ತು.
ಈ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಅರ್ಬಾಜ್ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದು, ಪೊಲೀಸರ ಗುಂಡಿನ ದಾಳಿಯಲ್ಲಿ ಆತ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಅರ್ಬಾಜ್ ಜೊತೆಗೆ ಮತ್ತಿಬ್ಬರು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾರೆ.
ಉಮೇಶ್ ಪಾಲ್ ಮತ್ತು ಅವರ ಪೊಲೀಸ್ ಭದ್ರತಾ ಸಿಬಂದಿ ಸಂದೀಪ್ ನಿಶಾದ್ ಅವರನ್ನು ಶುಕ್ರವಾರ ಪ್ರಯಾಗ್‌ರಾಜ್‌ನ ಧೂಮಂಗಂಜ್ ಪ್ರದೇಶದಲ್ಲಿನ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ದಾಳಿಯಲ್ಲಿ ಗಾಯಗೊಂಡಿದ್ದ ಇನ್ನೋರ್ವ ಭದ್ರತಾ ಸಿಬಂದಿ ರಾಘವೇಂದ್ರ ಸಿಂಗ್ ಅವರನ್ನು ಗಂಭೀರ ಸ್ಥಿತಿಯಲ್ಲಿ ಎಸ್‌ಆರ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ಭಾನುವಾರ ಲಕ್ನೋಗೆ ಕರೆದೊಯ್ಯಲಾಗಿದೆ.
ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ನೀಡಿದ ದೂರಿನ ಆಧಾರದ ಮೇಲೆ, ದರೋಡೆಕೋರ ರಾಜಕಾರಣಿ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್, ಪತ್ನಿ ಶಾಯಿಸ್ತಾ ಪರ್ವೀನ್, ಇಬ್ಬರು ಪುತ್ರರು, ಸಹಾಯಕರಾದ ಗುಡ್ಡು ಮುಸ್ಲಿಂ, ಗುಲಾಮ್ ಮತ್ತು ಇತರ ಒಂಬತ್ತು ಮಂದಿಯ ವಿರುದ್ಧ ಧೂಮಂಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.