ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೈಕೋರ್ಟ್ ಸಮ್ಮತಿ
ಬೆಂಗಳೂರು: ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಪರೀಕ್ಷೆ ರದ್ದುಪಡಿಸುವಂತೆ ಕೋರಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿದೆ.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ರೂಪಿಸಿರುವ ಮಾರ್ಗಸೂಚಿಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
‘ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್-ಸ್ಯಾನಿಟೈಸರ್, ಆರೋಗ್ಯ ತಪಾಸಣೆ, ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳ ನಡುವೆ ವೈಯಕ್ತಿಕ ಅಂತರಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.
‘ರಾಜ್ಯದಿಂದ ಹೊರಗೆ ತೆರಳಿರುವ ಹಾಗೂ ನೆರೆ ರಾಜ್ಯ ಮತ್ತು ಕಂಟೈನ್‌ಮೆಂಟ್ ಪ್ರದೇಶದಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತಿದ್ದರೆ ಅವರಿಗೆ ಜೂನ್ 25ರಂದು ಆರಂಭವಾಗುವ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಾರಣಾಂತರಗಳಿಂದ ಪರೀಕ್ಷೆಗೆ ಹಾಜರಾಗಿದ್ದರೆ, ಪೂರಕ ಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು. ಅದು ಅವರ ಮೊದಲ ಪ್ರಯತ್ನ ಎಂದು ಪರಿಗಣಿಸಲಾಗುವುದು’ ಎಂದು ವಿವರಿಸಿದರು.