ಉಡುಪಿ: ಮಾ.5 ರಂದು ಶಂಭು ಶೈಲೇಷ್ವರನ ತಪ್ಪಲಲ್ಲಿ “ಶೂದ್ರ ಶಿವ”
ಉಡುಪಿ, ಫೆ.26(ಉಡುಪಿ ಟೈಮ್ಸ್ ವರದಿ) ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಇವರ ಆಶ್ರಯದಲ್ಲಿ ಮಾರ್ಚ್ 5 ರ ಭಾನುವಾರ ಸಂಜೆ 7 ಗಂಟೆಗೆ ಉದ್ಯಾವರ ಹಿಂದೂ ಶಾಲಾ ವಾಸುದೇವ ಹೆಗ್ಡೆ ಬಯಲು ರಂಗ ಮಂಟಪದಲ್ಲಿ ಮಂಗಳೂರಿನ ರುದ್ರ ಥಿಯೇಟರ್ ನವರ ಶೂದ್ರ ಶಿವ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
‘ಶೂದ್ರಶಿವ’ ಎಂಬ ಹೆಸರಿನಲ್ಲೇ ಏನೋ ಒಂದು ವಿಶೇಷ ಅರ್ಥವಿದೆ, ಶಕ್ತಿಯಿದೆ, ಆಕರ್ಷಣೆಯಿದೆ. ಆತ ವೈದಿಕರ ಗಗನದ ಶಿವನಲ್ಲ, ಶೂದ್ರರ ನೆಲದ ಶಿವ. ನೀವು ಶಿವನನ್ನು ನಮ್ಮಿಂದ ದೂರ ಇಟ್ಟಾಗ ನಾವೇ ಕಂಡುಕೊಂಡ ನಮ್ಮ ಶಿವ. ನಾರಾಯಣ ಗುರುಗಳ ಮೂಲಕ ನಮಗೆ ಸಿಕ್ಕಿದ ಸ್ವಾಭಿಮಾನ, ಆತ್ಮಗೌರವದ ಶಿವ. ಮನುಜಭೇದವ ತೊರೆದು ನಮ್ಮವನೇ ಆದ ನಮ್ಮೊಳಗಿನ ಶಿವ.
ನೀವು ನಾರಾಯಣ ಗುರುಗಳ ಬಗ್ಗೆ, ಅವರ ಸಮಾಜ ಸುಧಾರಣಾ ಚಳುವಳಿಯ ಬಗ್ಗೆ ದೊಡ್ಡ ದೊಡ್ಡ ಗ್ರಂಥ ಬರೆಯಬಹುದು, ದೀರ್ಘಲೇಖನ ಬರೆಯಬಹುದು, ಗಂಟೆಗಟ್ಟಲೆ ಭಾಷಣ ಮಾಡಬಹುದು. ಇಷ್ಟಾಗಿಯೂ ಪಾಮರರಿಗೆ ಗುರುಗಳ ಕೆಲಸದ ವಿವರ ದಕ್ಕದೆ ಹೋಗಬಹುದು. ಆದರೆ ಸಿನಿಮಾ ಅಥವಾ ನಾಟಕದಂತಹ ಒಂದು ದೃಶ್ಯ ಮಾಧ್ಯಮ ಬೀರಬಹುದಾದ ಪರಿಣಾಮ ಅಸಾಧಾರಣವಾದುದು.
ಇದಕ್ಕೆ ಮಂಗಳೂರಿನ ರುದ್ರ ಥೇಟರ್ ಗ್ರೂಪ್ ನ ‘ಶೂದ್ರಶಿವ’ ನಾಟಕ ಅತ್ಯುತ್ತಮ ಉದಾಹರಣೆ. ಜನಸಾಮಾನ್ಯರಿಗೆ ಅರ್ಥವಾಗದ ನಾರಾಯಣ ಗುರುಗಳನ್ನು, ಅವರ ಆಲೋಚನೆಗಳನ್ನು, ಅವರ ಸುಧಾರಣಾ ಚಳುವಳಿಯ ಇತಿಹಾಸವನ್ನು ಶೂದ್ರಶಿವ ಕೇವಲ ಎರಡು ಗಂಟೆಗಳ ನಾಟಕದಲ್ಲಿ ವೀಕ್ಷಕರಿಗೆ ಪರಿಣಾಮಕಾರಿಯಾಗಿ ದಾಟಿಸುತ್ತದೆ, ಅವರನ್ನು ಕಾಡುತ್ತದೆ, ಅವರು ಎಂದೂ ಮರೆಯದಂತೆ ಮಾಡುತ್ತದೆ.
ಸ್ವಾಮಿ ವಿವೇಕಾನಂದರಿಂದಲೇ ‘ಹುಚ್ಚಾಸ್ಪತ್ರೆಯಂತೆ’ ಎಂದು ಕರೆಸಿಕೊಂಡ ಅಂದಿನ ಕೇರಳದಲ್ಲಿ ತಥಾಕಥಿತ ಕೆಳ ಜಾತಿಯವರು ಅನುಭವಿಸುತ್ತಿದ್ದ ಜಾತಿ ಶೋಷಣೆ, ಜಾತಿ ದೌರ್ಜನ್ಯ, ನಂಬೂದಿರಿಗಳು ಬರುವ ದಾರಿಯಲ್ಲಿ ಕಾಣಿಸಿಕೊಂಡರೂ ಶಿಕ್ಷೆ, ಮದುವೆಯಾದರೆ ಆ ಹೆಣ್ಣು ಮೊದಲು ನಂಬೂದಿರಿಗಳೊಂದಿಗೆ ಒಂದು ರಾತ್ರಿ ಕಳೆಯ ಬೇಕಾಗುವ ನರಕ, ಹೆಣ ತೆಗೆಯಲೂ ತೆರಿಗೆ, ಮೊಲೆಗೂ ತೆರಿಗೆ, ಬದುಕೇ ಕತ್ತಲು ಎನಿಸುವ ಇಂತಹ ಕಾಲದಲ್ಲಿ ಕಗ್ಗತ್ತಲ ಸುರಂಗದ ತುದಿಯಲ್ಲಿ ಬೆಳಕಿನ ಕಿರಣದಂತೆ, ಕಾರ್ಮೋಡದ ಬಾನಿನಲ್ಲಿ ಭರವಸೆಯ ನಕ್ಷತ್ರದಂತೆ ಕಾಣಿಸಿಕೊಳ್ಳುವ ನಾರಾಯಣ ಗುರುಗಳು, ದೇವಾಲಯಗಳಿಗೆ ಪ್ರವೇಶ ಇಲ್ಲ ಎಂದಾದಾಗ ತಮ್ಮದೇ ದೇವಾಲಯ ಕಟ್ಟಿಕೊಳ್ಳುವಂತೆ ಮಾಡುವ ಗುರುಗಳು ………
ನಾಟಕವನ್ನು ಪ್ರತಿಭಾವಂತ ಮತ್ತು ಅನುಭವಿ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶಿಸಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರ ರಂಗದ ಕಲಾ ವಿನ್ಯಾಸದಲ್ಲಿ ದೊಡ್ಡ ಹೆಸರು ಮಾಡಿರುವ ಶಶಿಧರ ಅಡಪ ಅವರು ನಾಟಕದ ರಂಗ ವಿನ್ಯಾಸ ಮಾಡಿದ್ದಾರೆ. ಶರತ್ ಎಸ್ ನೀನಾಸಂ ಹಾಗೂ ಮನೋಜ್ ವಾಮಂಜೂರು ಇವರು ರಂಗ ರೂಪ ನೀಡಿದ್ದಾರೆ.
ಬೆಳಕು- ನಿತೇಶ್ ಬಂಟ್ವಾಳ, ಧ್ವನಿ- ರಾಜೇಶ್, ತಂಡ ನಿರ್ವಹಣೆ- ಯೋಗೇಶ್ ಜೆಪ್ಪು ಮತ್ತು ಲೋಕೇಶ್, ಪ್ರಸಾದನ- ಶಿವರಾಮ ಕಲ್ಮಡ್ಕ, ಸಂಗೀತ- ಶರತ್ ಉಚ್ಚಿಲ, ಹಾಡಿದವರು- ಮೇಘನಾ ಕುಂದಾಪುರ ಮತ್ತು ಸಂಗಡಿಗರುಕುಂಬ್ಳೆ, ಸದಾನಂದ ರಾಜ್ಯದ 13 ಜಿಲ್ಲೆಗಳ 19 ಕಲಾವಿದರು ಅಭಿನಯಿಸಿದ್ದಾರೆ.
ನಾಟಕ ತಾಂತ್ರಿಕವಾಗಿ ತುಂಬಾ ಮೇಲ್ಮಟ್ಟವನ್ನು ಕಾಯ್ದುಕೊಂಡಿದೆ. ಬೆಳಕು, ಸಂಗೀತ, ರಂಗ ಸಂಯೋಜನೆ ಎಲ್ಲವೂ ಅತ್ಯುತ್ತಮವಾಗಿದೆ. ಕಲಾವಿದರ ನಟನಾ ಪ್ರತಿಭೆ ಎದ್ದು ಕಾಣಿಸುವಂತಿದೆ. ದೃಶ್ಯ ಸಂಯೋಜನೆಗಳು ನೆನಪಿನಲ್ಲಿ ಉಳಿಯುವಂತಿವೆ. ನಾರಾಯಣ ಗುರುಗಳನ್ನು ಭೇಟಿಯಾಗಲು ಮಹಾತ್ಮಾ ಗಾಂಧಿ ಓಡೋಡಿ ಬರುವ ದೃಶ್ಯ ತುಂಬಾ ಶಕ್ತಿಶಾಲಿಯಾಗಿ ಮೂಡಿಬಂದಿದ್ದು,
ಉದ್ಯಾವರ ಶಂಭು ಶೈಲೇಶ್ವರ ದೇವಸ್ಥಾನದ ಬೆಟ್ಟದ ತಟದಲ್ಲಿ ಇರುವ ಹಿಂದೂ ಶಾಲೆಯ ರಂಗ ಮಂಟಪದಲ್ಲಿ ನಡೆಯುವ ಈ ನಾಟಕ ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ಸರಿಯಾಗಿ ಸಂಜೆ 7 ಗಂಟೆಗೆ ಆರಂಭವಾಗಿ ರಾತ್ರಿ 9:10 ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ಗೌರವ ಅಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ ಯವರು ತಿಳಿಸಿರುತ್ತಾರೆ.