ನಾಡಿನ ಸುಖ, ಶಾಂತಿಗಾಗಿ ಯಾಗವು ಔಚಿತ್ಯ ಪೂರ್ಣವಾಗಿದೆ- ಸುರೇಶ್ ಶೆಟ್ಟಿ ಗುರ್ಮೆ
ಮಣಿಪಾಲ:;ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಶನಿವಾರದಂದು ನಡೆದ ಅತಿರುದ್ರ ಮಹಾಯಾಗದ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಧಾರ್ಮಿಕ ಮುಖಂಡರು ಹಾಗೂ ಸಮಾಜ ಸೇವಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ನಾಡಿನ ಸುಖ, ಶಾಂತಿ, ನೆಮ್ಮದಿಗೋಸ್ಕರ ಯಾಗವನ್ನು ನಡೆಸುತ್ತಿರುವ ಸಂಘಟಕರಿಗೆ ಧನ್ಯವಾದವನ್ನು ಅರ್ಪಿಸಿದರು. ಈ ಅರ್ಪಣೆಯನ್ನು ಭಗವಂತ ಒಪ್ಪಿಕೊಂಡು ಲೋಕಕ್ಕೆ ಸುಖ, ಶಾಂತಿ ಸಮೃದ್ಧಿಯನ್ನು ನೀಡಲಿ ಎಂದು ಹಾರೈಸಿದರು.
ಸಭೆಯನ್ನು ಉದ್ದೇಶಿಸಿ ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಅವರು, ಧರ್ಮ ಸಂಸ್ಥಾಪನೆ ಮಾಡಲು ದೇವರು ಅವತಾರವನ್ನೆತ್ತಿ ಬರುತ್ತಾನೆ ಎಂಬುದನ್ನು ಕೇಳಿದ್ದೇವೆ. ಆದರೆ ಕಲಿಯುಗದಲ್ಲಿ ಧರ್ಮ ಸಂಸ್ಥಾಪನೆಯಾಗಲು ಇಂತಹ ಯಾಗವನ್ನು ಮಾಡಬೇಕಿದೆ. ಈ ಯಾಗದಿಂದ ಇಡೀ ಸಮಾಜಕ್ಕೆ ನೆಮ್ಮದಿ ಸಿಗುತ್ತದೆ. ಅಪರೂಪದಲ್ಲಿ ಅಪರೂಪವಾಗಿರುವ ಅತಿರುದ್ರ ಮಹಾಯಾಗವನ್ನು ಜಿಲ್ಲೆಯ ಜನತೆಗೆ ಕಾಣ ಸಿಗಲು ಮಾಡಿದ ಮಹೇಶ್ ಠಾಕೂರ್ ಅವರಿಗೆ ಅಭಿನಂದಿಸಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಇದೀಗ ಮಣಿಪಾಲದ ಅತಿರುದ್ರ ಮಹಾಯಾಗದ ಕಡೆ ಮುಖ ಮಾಡಿರುವುದಕ್ಕೆ ಯಾಗದ ಸಂಘಟಕರಿಗೆ ಧನ್ಯವಾದವನ್ನು ಅರ್ಪಿಸಿದರು.
ನಂತರ ಮಾತನಾಡಿದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಮಣಿಪಾಲ ಶೈಕ್ಷಣಿಕ ಕ್ಷೇತ್ರವಾದರೂ, ಆಧ್ಯಾತ್ಮ ಮೂಲಕ ಎಲ್ಲರನ್ನು ಸೆಳೆಯುವ ಕ್ಷೇತ್ರ ಶಿವಪಾಡಿಯ ಕ್ಷೇತ್ರವಾಗಿದೆ. ಧರ್ಮದ ಕಾರ್ಯದ ಮುಖಾಂತರ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಹೇಶ್ ಠಾಕೂರ್ ಮಾಡಿದ್ದಾರೆ ಎಂದು ಅವರನ್ನು ಹಾಗೂ ಸಂಘಟಕರಿಗೆ ಅಭಿನಂದಿಸಿದರು. ನಂತರ ಪ್ರಕೃತಿಯೊಂದಿಗೆ ಬಾಳುವುದು ಸಂಕೃತಿಯಾಗಿದೆ ಎಂದು ಪ್ರಕೃತಿ ಶಕ್ತಿ ಹಾಗೂ ನಾರಿ ಶಕ್ತಿಯನ್ನು ಎತ್ತಿ ಹಿಡಿದರು.
ಈ ಸಭಾ ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಉತ್ತರಖಾಂಡ ಮತ್ತು ಉತ್ತರಪ್ರದೇಶದ ಉಪಕುಲಪತಿಗಳು ಹಾಗೂ ಆಯುರ್ವೇದ ತಜ್ಞರಾದ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಡಾ. ತನ್ಮಯ್ ಗೋಸ್ವಾಮಿ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರದ ಗುತ್ತಿಗೆದಾರರಾದ ಕಾರ್ತಿಕ್ ಆರ್. ನಾಯಕ್, ಪರ್ಕಳದ ಉದ್ಯಮಿ ದಿಲೀಪ್ ರಾಜ್ ಹೆಗ್ಡೆ, ಸ್ವದೇಶಿ ಔಷಧಿ ಬಂಡಾರದ ಉದ್ಯಮಿಯಾದ ರಘು ಪ್ರಸಾದ್ ಪ್ರಭು, ಉಡುಪಿ ಸಮಾಜದ ಅಧ್ಯಕ್ಷರಾದ ಪ್ರಭಾಕರ್ ನಾಯಕ್, ಅತಿರುದ್ರ ಮಹಾಯಾಗ ಸಮಿತಿಯ ಸಂಚಾಲಕರಾದ ಡಾ. ನಾರಾಯಣ ಶೆಣೈ, ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಭಾರತೀಯ ಸಂಜಯ್ ಪ್ರಭು, ದೀಪಲಕ್ಷ್ಮಿ ಪ್ರಭು, ಲಕ್ಷ್ಮೀ ನಾಗೇಶ್ ಪ್ರಭು, ಪುಷ್ಪ ನಂದಾಕಿಶೋರ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅತಿರುದ್ರ ಮಹಾಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ ಸ್ವಾಗತಿಸಿದರು. ಹಿರಿಯ ಪುರೋಹಿತರಾದ ದಿವಾಕರ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಲಯದ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ವಂದಿಸಿದರು.
ನಂತರ ಡಾ. ತನ್ಮಯ್ ಗೋಸ್ವಾಮಿ ಅವರಿಂದ ಧಾರ್ಮಿಕ ಉಪನ್ಯಾಸ, ಉದಯೋನ್ಮುಖ ಕಲಾವಿದರಾದ ಗಗನ್ ಗಾಂವ್ಕರ್, ಅನುರಾಧ ಭಟ್, ಸುನೀತಾ ಭಟ್ ಕೊಡುವಿಕೆಯಲ್ಲಿ “ಭಕ್ತಿ ಗಾನ ಸಿಂಚನ” ಮತ್ತು ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ನೇತೃತ್ವದಲ್ಲಿ ರಾಷ್ಟ್ರದೇವೋಭವಃ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ “ಪುಣ್ಯ ಭೂಮಿ ಭಾರತ”, ಆದರ್ಶ್ ಗೋಖಲೆ ಅವರ ನಿರೂಪಣೆಯಲ್ಲಿ ಜರುಗಿತು.