ನಮ್ಮ ಸಮುದಾಯಕ್ಕೂ ರಾಜಕೀಯ ಸ್ಥಾನಮಾನ ,ನಿಗಮ ಮಂಡಳಿ ನೀಡಿ- ಧರ್ಮಪಾಲ ದೇವಾಡಿಗ
ಉಡುಪಿ ಫೆ.25(ಉಡುಪಿ ಟೈಮ್ಸ್ ವರದಿ): ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡದ ವಿಧಾನಸಭಾ ಕ್ಷೇತ್ರಗಳಲ್ಲಿ ದೇವಾಡಿಗ ಸಮುದಾಯದ ಅಭ್ಯರ್ಥಿಗಳಿಗೆ ಸ್ಥಾನಗಳನ್ನು ನೀಡಬೇಕು ಎಂದು ವಿಶ್ವ ದೇವಾಡಿಗ ಮಹಾಮಂಡಳ ರಾಷ್ಟ್ರೀಯ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿಕೊಂಡಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಷ್ಟ್ರೀಯ ದೇವಾಡಿಗ ಮಹಾ ಮಂಡಳದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಅವರು, ನಾವು ದೇವಾಡಿಗ ಅಭಿವೃದ್ಧಿ ನಿಗಮ ಮಂಡಳಿಗೆ 2021ರಲ್ಲಿ ಬೇಡಿಕೆ ಇಟ್ಟಿದ್ದೇವೆ. ಹೆಚ್ಚಿನ ಸಮುದಾಯದವರಿಗೆ ಮಂಜೂರಾತಿ ದೊರಕಿದರೂ ನಮ್ಮ ಸಮಾಜವನ್ನು ಕಡೆಗಣಿಸಲಾಗಿದೆ, ಈ ಬಗ್ಗೆ ಸ್ಥಳೀಯ ಶಾಸಕರು, ಸಚಿವರು, ಲೋಕಸಭಾ ಸದಸ್ಯರು, ಹಿಂದುಳಿದ ಆಯೋಗಗಳನ್ನೂ ಸಮಯ ಸಮಯಕ್ಕೆ ಮನವಿ ಮಾಡಿದರೂ, ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ದೇವಾಡಿಗ ಸಮಾಜಕ್ಕೂ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ದೇವಾಡಿಗ ಬಂಧುಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಉನ್ನತೀಕರಣಕ್ಕೆ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಂಡರು.
ಸಮುದಾಯಕ್ಕೆ ರಾಜಿಕೀಯ ರಂಗದಲ್ಲಿ ನಮಗೆ ಶೋಷಣೆಯಾಗುತ್ತಿದೆ ಎಂದ ಅವರು, ಎಲ್ಲಾ ಸಮಾಜಕ್ಕೂ ಒಂದು ಅಥವಾ ಎರಡು ಶಾಸಕರ ಸ್ಥಾನಮಾನ ನೀಡುತ್ತಿರುವಾಗ, ಸುಮಾರು 6 ಲಕ್ಷದಿಂದ 7 ಲಕ್ಷ ಜನಸಂಖ್ಯೆಯುಳ್ಳ ಅಂದಾಜು ಸುಮಾರು 4 ಲಕ್ಷದಷ್ಟು ಮತದಾರರನ್ನು ದೇವಾಡಿಗ ಸಮಾಜವು ಹೊಂದಿದೆ. ಈಗಿನ ರಾಜಕೀಯ ವಾತಾವರಣದಲ್ಲಿ ಮಗುವು ಕೂಗದೆ ತಾಯಿ ಹಾಲು ನೀಡುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದಿನಮಾನಗಳಲ್ಲಿ ನ್ಯಾಚುರಲ್ ಜಸ್ಟೀಸ್ ಎನ್ನುವ ಪರಿಕಲ್ಪನೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದು ಅತ್ಯಂತ ನೋವಿನ ಹಾಗೂ ಆಕ್ರೋಶದ ವಿಚಾರವನ್ನು ಬಹಳ ಗಂಭೀರವಾಗಿ ನಮ್ಮ ಸಮಾಜವು ಗಮನಿಸುತ್ತಿದೆ. ರಾಜ್ಯದಲ್ಲಿ ಧರ್ಮ ಗುರುಗಳೇ ಟಿಕೆಟ್ ಗೆ ಲಾಬಿ ನಡೆಸುತ್ತಿರುವಾಗ, ನಾವು(ದೇವಾಡಿಗ) ಹಿಂದುಳಿದ ವರ್ಗದವರು, ನಮಗೂ ಈ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡದ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾನಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಹಾಗೂ ಬಹುಸಂಖ್ಯಾ ಬಲವುಳ್ಳ ಜಾತಿಗಳಿಗೆ ಸಮುದಾಯ ಭವನ ಹಾಗು ಇನ್ನಿತರ ಎಲ್ಲಾ ರೀತಿಯ ಸೌಲಭ್ಯಗಳು ಗರಿಷ್ಠ ಪ್ರಮಾಣದಲ್ಲಿ ಸಿಗುತ್ತಿದೆ ಆದರೆ ಎಲ್ಲಾ ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮ್ಮ ಸಮಾಜಕ್ಕೆ ಯಾವ ಅನುದಾನಗಳು ಸರಿಯಾಗಿ ಸಿಗುತ್ತಿಲ್ಲ. ದೇವಸ್ಥಾನಗಳಲ್ಲಿ ಹಲವಾರು ತಲೆಮಾರಿನಿಂದ ಸೇವೆ ನಡೆಸುತ್ತಾ, ಎಲ್ಲಾ ವಿಧಿ ವಿಧಾನಗಳನ್ನು ತಿಳಿದಿದ್ದರು. ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಮ್ಮನ್ನು ಹೊರಗೆ ಇಡುವ ಹುನ್ನಾರ ನಡೆಯುತ್ತಿದೆ. ಸಮಿತಿಗಳಲ್ಲಿ ಇದ್ದವರನ್ನೂ ದೇವಸ್ಥಾನದ ಸಮಿತಿಯಿಂದ ಹೊರಗೆ ಹಾಕಲಾಯಿತು, ಹೀಗೇ ಅನೇಕ ದೇವಸ್ಥಾನಗಳಲ್ಲಿ ನಮಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದರು.
ಇದರೊಂದಿಗೆ ದೇವಾಡಿಗ ಅಭಿವೃದ್ಧಿ ನಿಗಮದ ಸ್ಥಾಪನೆ ಮಾಡಿ ಸೂಕ್ತ ಅನುದಾನ ನೀಡಬೇಕು. ಕರ್ನಾಟಕ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗೆ ತಯಾರಿ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಲ್ಲಿ ಪ್ರಮುಖ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ನಮ್ಮ ಸಮಾಜದ ಬಂಧುಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬೇಕು. ದೇವಸ್ಥಾನ ಮತ್ತಿತರ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಲ್ಲಿನ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಚೆನ್ನಾಗಿ ತಿಳಿದವರಾಗಿರುವ ನಮ್ಮ ಸಮಾಜದ ಬಂಧುಗಳಿಗೆ ಆಯಾಯ ಕ್ಷೇತ್ರಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ತಮ್ಮ ಬೇಡಿಕೆಗಳನ್ನು ತಿಳಿಸಿದರು. ಹಾಗೂ ಈ ಎಲ್ಲ ವಿಚಾರಗಳನ್ನು ರಾಷ್ಟ್ರೀಯ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯಪ್ರವರ್ತ ರಾಗಬೇಕು. ಇಲ್ಲದೆ ಇದ್ದ ಪಕ್ಷದಲ್ಲಿ ಇದೇ ರೀತಿಯ ನಿರ್ಲಕ್ಷ ಭಾವನೆ, ಕಡೆಗಣನೆ ಮುಂದುವರೆದರೆ ನಾವು ರಾಜಕೀಯ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಂಡು ನಮಗೆ ಮನ್ನಣೆ ನೀಡುವವರನ್ನು ನಾವು ಗುರುತಿಸುವ ಕೆಲಸ ಮತ್ತು ಅವರಿಗೆ ನಾವು ರಾಜಕೀಯವಾಗಿ ನೆರವು ನೀಡುವ ಕಾರ್ಯವನ್ನು ಖಂಡಿತವಾಗಿಯು ಸಂಘಟಿತವಾಗಿ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ದೇವಡಿಗ ಮಹಾ ಮಂಡಲದ ಕಾರ್ಯದರ್ಶಿ ಗಣೇಶ್ ದೇವಾಡಿಗ ಅಂಬಲಪಾಡಿ, ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್, ಉಡುಪಿ ದೇವಾಡಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಸೇರಿಗಾರ್, ಸದಸ್ಯ ರತ್ನಾಕರ ಜಿ.ಎಸ್. ಉಪಸ್ಥಿತರಿದ್ದರು.