ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ- ಮಾ.1 ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಸಿಐಟಿಯು ಕರೆ

ಬೆಂಗಳೂರು, ಫೆ.25 : ಕಾರ್ಮಿಕರ ಕೆಲಸದ ಅವಧಿಯನ್ನು ಗರಿಷ್ಟ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ತಿದ್ದುಪಡಿ ವಿಧೇಯಕ ವಿರೋಧಿಸಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಮಾರ್ಚ್ 1ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.

ಈ ವಿಚಾರವಾಗಿ ಫೆ.28ರಂದು ಎಲ್ಲಾ ಕಾರ್ಖಾನೆಗಳ ದ್ವಾರದ ಬಳಿ ಕಾರ್ಮಿಕರಿಂದ ವಿಧೇಯಕ ಪ್ರತಿ ದಹನ ಮತ್ತು ಮಾರ್ಚ್ 1ರಂದು ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರು,  ಕೂಡಲೇ ಈ ವಿಧೇಯಕವನ್ನು ಹಿಂಪಡೆಯಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರದ ಈ ಕಾರ್ಮಿಕ ವಿರೋಧಿ ವಿಧೇಯಕವನ್ನು ವಿರೋಧಿಸಿ ಮಾ.1ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಪ್ರಸಕ್ತ ಕಾಯ್ದೆಯಲ್ಲಿ ದಿನದ ಕೆಲಸದ ಅವಧಿಯ ಆರಂಭದಿಂದ ಗರಿಷ್ಠ 5 ಗಂಟೆಗೆ 30 ನಿಮಿಷ ವಿರಾಮವನ್ನು ನೀಡಬೇಕು. ಆದರೆ ಈ ತಿದ್ದುಪಡಿ ವಿಧೇಯಕದಲ್ಲಿ ವಿರಾಮವಿಲ್ಲದೆ ದುಡಿಮೆ ಮಾಡುವ ಅವಧಿ ಗರಿಷ್ಠ 5 ಗಂಟೆಯಿಂದ 6 ಗಂಟೆಗೆ ಹೆಚ್ಚಿಸಲಾಗಿದೆ. ಹಾಗೂ ಕಾರ್ಮಿಕರ ದಿನದ ಕೆಲಸದ ಗರಿಷ್ಠ ಅವಧಿ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲಾಗಿದೆ. ಇದು ಕಾರ್ಮಿಕರ ಶೋಷಣೆಗೆ ಮತ್ತಷ್ಟು ಅವಕಾಶ ಕಲ್ಪಿಸಿದ್ದು, ಇದು ಖಂಡನೀಯ. ಈ ತಿದ್ದುಪಡಿಗಳು ಕಾರ್ಮಿಕರ ಮೇಲೆ ವಿರಾಮವಿಲ್ಲದೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡ, ಶೋಷಣೆ ಹೆಚ್ಚಿಸಲಿದೆ. ಹಲವು ಕಾರ್ಖಾನೆಗಳ ಮಾಲಕರಿಗೆ 6 ದಿನಗಳಲ್ಲಿ ಆಗುತ್ತಿದ್ದ ಉತ್ಪಾದನೆ 4 ದಿನಗಳಲ್ಲೇ ಕಾರ್ಮಿಕರ ಶ್ರಮದ ಶೋಷಣೆಯಿಂದ ಸಿಗಲಿದೆ. ಮೂರು ಶಿಫ್ಟ್ ಗಳಿಗೆ ಒದಗಿಸಬೇಕಾದ ಸಾರಿಗೆ ಸೌಲಭ್ಯ ಹಾಗೂ ಕ್ಯಾಂಟೀನ್ ಮತ್ತು ಇನ್ನಿತರ ಸೌಲಭ್ಯಗಳನ್ನು ಉಳಿಸಲು ಇದು ಅವಕಾಶ ಕಲ್ಪಸುತ್ತದೆ. ಚಾರಿತ್ರಿಕ 8 ಗಂಟೆ ಕೆಲಸ 8 ಗಂಟೆ ವಿರಾಮ ಮತ್ತು 8 ಗಂಟೆ  ಮನೋರಂಜನೆ ಎಂಬ ಜೀವಪರ ತಾತ್ವಿಕ ನೆಲೆಯನ್ನು ಕಳಚಿ ಹಾಕಿ ಬಂಡವಾಳಕ್ಕೆ ಲಾಭ ಮಾಡಿಕೊಡುವ ನವ ಉದಾರವಾದಿ ಆರ್ಥಿಕ ನೀತಿಯ ಜಾರಿಯ ನಿಟ್ಟಿನಲ್ಲಿ ಬಿಜೆಪಿ ಸರಕಾರವು ಈ ತಿದ್ದುಪಡಿಗೆ ಕ್ರಮ ವಹಿಸಿದೆ ಎಂದು ಹೇಳಿದ್ದಾರೆ.

ಮಹಿಳಾ ಕಾರ್ಮಿಕರನ್ನು ರಾತ್ರಿಪಾಳಿಯಲ್ಲಿ ದುಡಿಮೆ ಮಾಡಿಕೊಳ್ಳಲು ಕಾರ್ಖಾನೆ ಮಾಲಕರಿಗೆ ಅನುವುಗೊಳಿಸಿ ತಿದ್ದುಪಡಿ ಮಾಡಿರುವುದು ಮಹಿಳಾ ಕಾರ್ಮಿಕರನ್ನು ದುಡಿಮೆಯಿಂದ ಹೊರಗಿಡುವ ಹುನ್ನಾರವಾಗಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಪ್ರಕಟಿಸಿದೆ. ಹಾಗೂ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ 2020ರಲ್ಲಿ ಕಾರ್ಮಿಕ ವಿರೋಧಿಯಾಗಿ ಈ ಕಾಯ್ದೆಗೆ ತಿದ್ದುಪಡಿಯನ್ನು ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಈ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ ಮಾಡಿದರು ಕಾರ್ಮಿಕರ ತೀವ್ರ ವಿರೋಧದಿಂದಾಗಿ ವಿಧಾನ ಪರಿಷತ್ತಿನಲ್ಲಿ ಸೋಲಾಗಿತ್ತು. ಈಗ ಬಿಜೆಪಿ ಸರ್ಕಾರ ಚುನಾವಣೆ ಹೊಸ್ತಿಯಲ್ಲಿ ಬಂಡವಾಳಗಾರರ ಲಾಭವನ್ನು ಹೆಚ್ಚಿಸಲು ಈ ತಿದ್ದುಪಡಿ ವಿಧೇಯಕವನ್ನು ಶಾಸನಸಭೆಯಲ್ಲಿ ಅಂಗೀಕಾರ ಮಾಡಿರುವುದು ಕಾರ್ಮಿಕ ವಿರೋಧಿ ನಡೆಯಾಗಿದೆ ಸಿಐಟಿಯು ಹೇಳಿದೆ.

Leave a Reply

Your email address will not be published. Required fields are marked *

error: Content is protected !!