₹20 ಸಾವಿರ ಕೋಟಿ ವೆಚ್ಚದ ಮೀನುಗಾರಿಕಾ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ: ಮೀನುಗಾರಿಕೆ ಹಾಗೂ ಪಶುಸಂಗೋಪನೆ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುವಾರ ಚಾಲನೆ ನೀಡಿದರು.
ಬಿಹಾರದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಧಾನಿಯವರು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಅಕ್ಟೋಬರ್– ನವೆಂಬರ್ ತಿಂಗಳಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಮೀನುಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಳ ಮತ್ತು ರಫ್ತು ಪ್ರಮಾಣವನ್ನು ಏರಿಸುವುದಕ್ಕಾಗಿ ₹20,050 ಕೋಟಿ ಮೊತ್ತದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು.
ಹೈನುಗಾರಿಕೆ ಕುರಿತು ರೈತರಿಗೆ ಮಾಹಿತಿ ನೀಡುವ ‘ಇ–ಗೋಪಾಲ‘ ಮೊಬೈಲ್ ಅಪ್ಲಿಕೇಷನ್ ಉದ್ಘಾಟಿಸಿದರು. ನಂತರ ಬಿಹಾರ ರಾಜ್ಯ ಸರ್ಕಾರದ ಸಹಯೋಗದಲ್ಲಿ ಪುರ್ನಿಯಾದಲ್ಲಿ75 ಎಕರೆಯಲ್ಲಿ ₹84.27 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಸೆಮನ್ ಸ್ಟೇಷನ್ ಉದ್ಘಾಟಿಸಿದರು.
ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ಕೊರೊನಾ ವೈರಸ್ ಸೋಂಕನ್ನು ತೀರ ಲಘುವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದರು.
‘ವಿಜ್ಞಾನಿಗಳು ಕೊರೊನಾ ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವವರೆಗೂ, ಮಾಸ್ಕ್ ಧರಿಸುವುದು ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತಹ ನಿಯಮಗಳನ್ನು ಅನುಸರಿಸಬೇಕು‘ ಎಂದು ಹೇಳಿದರು.
‘ಸುರಕ್ಷಿತವಾಗಿರಿ ಮತ್ತು ಆರೋಗ್ಯದಿಂದಿರಿ. ನಿಮ್ಮ ಕುಟುಂಬದಲ್ಲಿರುವ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇವೆಲ್ಲ ಬಹು ಮುಖ್ಯವಾದ ಕ್ರಮಗಳು. ಕೊರೊನಾ ವೈರಸ್ ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ. ನಾನು ನಿಮ್ಮಿಂದ ನಿರೀಕ್ಷಿಸುವುದು ಇಷ್ಟೆ; ಮಾಸ್ಕ್ ಧರಿಸುವ ಹಾಗೂ ವ್ಯಕ್ತಿಗಳಿಂದ ಎರಡು ಅಡಿ ಅಂತರ ಕಾಯ್ದುಕೊಳ್ಳುವಂತಹ ನಿಯಮಗಳನ್ನು ಪಾಲಿಸಿ‘ ಎಂದು ಪ್ರಧಾನಿ ಮನವಿ ಮಾಡಿದ್ದಾರೆ.