ಕುಂದಾಪುರ: ನಕಲಿ ಸಹಿ ಹಾಕಿ ಹೊಟೇಲ್ ಉದ್ಯಮಿಯ ಜಾಗ ಮಾರಾಟ- ದೂರು ದಾಖಲು
ಕುಂದಾಪುರ ಫೆ.23 (ಉಡುಪಿ ಟೈಮ್ಸ್ ವರದಿ): ನಕಲಿ ಸಹಿ ಹಾಕಿ ಜಾಗವನ್ನು ಕಬಳಿಸಿದ್ದು ಮಾತ್ತವಲ್ಲದೆ ಆ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಿ ವಂಚನೆ ಮಾಡಿರುವುದಾಗಿ ಕೋಟೇಶ್ವರದ ನಿವಾಸಿಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ನಿವಾಸಿ, ರಾಘವೇಂದ್ರ ಅವರು, ಪ್ರಸ್ತುತ ದಾವಣಗೆರೆಯಲ್ಲಿ ಹೊಟೇಲ್ ವ್ಯವಹಾರ ನಡೆಸಿ ಕೊಂಡಿದ್ದಾರೆ. ಇವರಿಗೆ ಕೋಟೇಶ್ವರ ಗ್ರಾಮದಲ್ಲಿ ಪೂರ್ವಿಕರ ಕೃಷಿ ಭೂಮಿಗಳಿದ್ದು, ಈ ಭೂಮಿಯ ಬಗ್ಗೆ ಸೀತಾರಾಮ ತವಳ ಮತ್ತು ಅವರ ಮಗ ಸುಧೀಂದ್ರ ಸೇರಿ ನೋಟರಿ ಆನಂದ ಭಂಢಾರಿರವರ ಸಮಕ್ಷಮ ಅಧಿಕಾರ ಪತ್ರ ತಯಾರಿಸಿ ಈ ಅಧಿಕಾರ ಪತ್ರಕ್ಕೆ ರಾಘವೇಂದ್ರ ಅವರ ನಕಲಿ ಸಹಿ ಹಾಕಿಸಿ ತಮ್ಮ ಹೆಸರಿಗೆ ಕ್ರಯ ಪತ್ರವನ್ನು ಮಾಡಿಕೊಂಡಿದ್ದಾರೆ.
ಅಲ್ಲದೆ ಆರೋಪಿಗಳಾದ ಸೀತಾರಾಮ ತವಳ, ಕೆ.ಉಪೇಂದ್ರ ಕುಮಾರ್ ಮತ್ತು ಅನುರಾಧಾ ಎಂ ಪುರಾಣಿಕ್ ರವರು ಮತ್ತೊಂದು ಮೋಸದ ಕ್ರಯ ಪತ್ರ ಮಾಡಿ ರಾಘವೇಂದ್ರ ಅವರ ಕುಟುಂಬಕ್ಕೆ ಸಾಲ ಮಾಡಿಸಿಕೊಡುವ ಉದ್ದೇಶದಿಂದ ರಾಘವೇಂದ್ರ ಅವರನ್ನು ನಂಬಿಸಿ ಅವರಿಗೆ ತಿಳಿಸದೆ ಅವರಿಂದ ಸಹಿಯನ್ನು ಮಾಡಿಸಿಕೊಂಡು ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂಬುದಾಗಿ ರಾಘವೇಂದ್ರ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.