ಎಂಸಿಡಿ ಮೇಯರ್ ಚುನಾವಣೆ ಸೋಲು ಅರಗಿಸಿಕೊಳ್ಳಲಾಗದೆ ಬಿಜೆಪಿಯಿಂದ ಗೂಂಡಾಗಿರಿ- ಎಎಪಿ ಆರೋಪ
ನವದೆಹಲಿ, ಫೆ 23: ದೆಹಲಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯ ಸೋಲನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆ ಪಕ್ಷ ಗೂಂಡಾಗಿರಿಯಲ್ಲಿ ತೊಡಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ದೆಹಲಿ ಬಿಜೆಪಿ ಹೊಸದಾಗಿ ಮತದಾನ ನಡೆಯಬೇಕೆಂದು ಒತ್ತಾಯಿಸಿತು. ಸ್ಥಾಯಿ ಸಮಿತಿ ಚುನಾವಣೆಯ ಗದ್ದಲದ ನಡುವೆ ದೆಹಲಿ ಮಹಾನಗರ ಪಾಲಿಕೆಯ ಸದನವನ್ನು ಗುರುವಾರ ಮುಂದೂಡಲಾಯಿತು.
ಇನ್ನು ನಾಗರಿಕ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೂತನ ಮೇಯರ್ ಶೆಲ್ಲಿ ಒಬೆರಾಯ್, ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಕೌನ್ಸಿಲರ್‌ಗಳು ಮತ ಪೆಟ್ಟಿಗೆಗಳನ್ನು ಎಸೆದಿರುವುದು ಅಕ್ಷಮ್ಯ. ಮತ ಪೆಟ್ಟಿಗೆ ಎಸೆದಿದ್ದು ಮಾತ್ರವಲ್ಲದೆ ಮತ ಪತ್ರಗಳನ್ನೂ ಅವರು ಹರಿದು ಹಾಕಿದ್ದಾರೆ ಎಂದು ಆಪಾದಿಸಿದರು. ಅವರ ನಡವಳಿಕೆ ನಾಚಿಕೆಗೇಡಿನದ್ದಾಗಿದೆ. ನನ್ನ ಮೇಲೆಯೂ ಅವರು ಹಲ್ಲೆಗೆ ಮುಂದಾಗಿದ್ದಾರೆ. ಇಂದೂ ಕೂಡಾ ಸದನ ನಡೆಯಲು ಅಡ್ಡಿಪಡಿಸಿದ್ದಾರೆ. ನಿನ್ನೆಯ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.