ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್: ಹಣ ಅಕ್ರಮ ವರ್ಗಾವಣೆ ಪ್ರಕರಣ- ಇ.ಡಿಯಿಂದ ಓರ್ವನ ಬಂಧನ

ನವದೆಹಲಿ: 1,000 ಕೋಟಿಗೂ ಹೆಚ್ಚು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬೆಂಗಳೂರು ಮೂಲದ ಸಹಕಾರಿ ಬ್ಯಾಂಕ್ ವಿರುದ್ಧ ನಡೆಯುತ್ತಿರುವ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜೇಶ್ ವಿಆರ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬ್ಯಾಂಕಿನ ಮ್ಯಾನೇಜ್‌ಮೆಂಟ್ ಸಹಕಾರದಿಂದ ಬ್ಯಾಂಕಿನಿಂದ ಹೊರತೆಗೆಯಲಾದ ನಿಧಿಯ ಪ್ರಮುಖ ಫಲಾನುಭವಿ ‘ಈತ’ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಸಂಸ್ಥೆಯು ಕಳೆದ ವರ್ಷ ಫೆಬ್ರವರಿಯಲ್ಲಿ ಈ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ ರಾಮಕೃಷ್ಣ ಅವರನ್ನು ಬಂಧಿಸಿತ್ತು. ರಾಜೇಶ್ ವಿಆರ್ ಪಾತ್ರದ ಬಗ್ಗೆ ಮಾತನಾಡಿದ ಇ.ಡಿ, ‘ಆರ್‌ಬಿಐನ ತಪಾಸಣಾ ವರದಿ ಪ್ರಕಾರ, ಆತ ಬ್ಯಾಂಕ್‌ನಿಂದ 40.40 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದಾರೆ ಮತ್ತು ಅದನ್ನು ಮರುಪಾವತಿ ಮಾಡಿಲ್ಲ’ ಎಂದಿದೆ.

ರಾಜೇಶ್ ವಿಆರ್ ಮತ್ತು ಅವರ ಪತ್ನಿ ಇತರ ಸಹಕಾರಿ ಬ್ಯಾಂಕ್‌ಗಳು/ಸೊಸೈಟಿಗಳಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡಿದ ಪ್ರಕರಣಗಳಲ್ಲಿ ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳಿವೆ ಎಂಬುದು ತನಿಖೆ ಸಮಯದಲ್ಲಿ ಗಮನಕ್ಕೆ ಬಂದಿದೆ. ಹೀಗಾಗಿ ಅವರು ವಾಡಿಕೆಯ ಅಪರಾಧಿಗಳಾಗಿದ್ದಾರೆ ಎಂದು ಇ.ಡಿ ಆರೋಪಿಸಿದೆ.

ಫೆಬ್ರುವರಿ 2020 ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿ ಕೊಂಡಿದೆ. ಚಾಲ್ತಿಯಲ್ಲಿರುವ ಮಾರುಕಟ್ಟೆ ದರಗಳಿಗಿಂತ ಹೆಚ್ಚಿನ ಬಡ್ಡಿದರದ ಭರವಸೆ ನೀಡಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವಂತೆ ಮಾಡಿ, ಆ ಹಣವನ್ನು ಬ್ಯಾಂಕ್ ಉದ್ಯೋಗಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ನಕಲಿ ಖಾತೆಗಳನ್ನು ಸೃಷ್ಟಿಸಿ, ಸಾಲಕ್ಕೆ ಸೂಕ್ತ ಭದ್ರತೆಯನ್ನು ಪಡೆಯದೆ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಹಣವನ್ನು ನೀಡಲಾಗಿದೆ. ಈ ಪ್ರಕರಣದಲ್ಲಿ ಈ ಹಿಂದೆ 45.32 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಸ್ಥೆ ಜಪ್ತಿ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!