ಅದಾನಿ ಸಮೂಹದ ವಿಚಾರದಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ- ಅಮಿತ್ ಶಾ

ನವದೆಹಲಿ ಫೆ.14 : ಅದಾನಿ ಸಮೂಹದ ವಿಚಾರದಲ್ಲಿ ಮುಚ್ಚಿಡುವಂತಹದ್ದಾಗಲೀ ಅಥವಾ ಭಯ ಪಡುವಂತಹದ್ದಾಗಲಿ ಏನೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅದಾನಿ ಸಮೂಹದ ಕಂಪನಿಗಳಿಗೆ ರಕ್ಷಣೆ ನೀಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದಾನಿ ಸಮೂಹದ ವಿಚಾರದಲ್ಲಿ ವಿರೋಧ ಪಕ್ಷದವರು‌ ಏಕೆ ನ್ಯಾಯಾಲಯದಲ್ಲಿ ದೂರು ದಾಖಲಿಸುತ್ತಿಲ್ಲ? ಪೆಗಾಸಸ್ ಪ್ರಕರಣ ಬೆಳಕಿಗೆ ಬಂದಾಗಲೂ ಸಾಕ್ಷಿಯೊಂದಿಗೆ ಕೋರ್ಟ್‌ಗೆ ಹೋಗಿ ಎಂದು ಅವರಿಗೆ ಹೇಳಿದ್ದೆ. ಆದರೆ, ಹಾಗೆ ಮಾಡಲಿಲ್ಲ. ಅವರಿಗೆ ಬೊಬ್ಬೆ ಹೊಡೆಯುವುದಷ್ಟೇ ಗೊತ್ತಿದೆ. ನ್ಯಾಯಾಲಯ ನಮ್ಮ ಹಿಡಿತದಲ್ಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೂ ಇದೇ ವೇಳೆ ಅವರು ಕೇಸರಿ ಪಕ್ಷಕ್ಕೆ (ಬಿಜೆಪಿಗೆ) 2024ರ ಸಾರ್ವತ್ರಿಕ ಚುನಾವಣೆಗೆ ಪ್ರತಿಸ್ಪರ್ಧಿಗಳೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಸಂಪೂರ್ಣ ಬೆಂಬಲವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅದಾನಿ ಸಮೂಹದ ಷೇರು ಅಕ್ರಮದ ಕುರಿತು ಇತ್ತೀಚೆಗೆ ಹಿಂಡನ್ ಬರ್ಗ್ ಎಂಬ ಸಂಶೋಧನಾ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ, ಅದಾನಿ ಸಮೂಹವು ‘ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ ಹಾಗೂ ಲೆಕ್ಕಪತ್ರ ವಂಚನೆ ಎಸಗಿದೆ’ ಎಂದು ಆರೋಪಿಸಿತ್ತು. ಹೀಗಾಗಿ ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಲೇ ಬೇಕೆಂದು ಪಟ್ಟು ಹಿಡಿದ ವಿರೋಧ ಪಕ್ಷಗಳ ಸಂಸದರು ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನದ ಕಲಾಪಕ್ಕೆ ಪದೇ ಪದೇ ಅಡ್ಡಿಪಡಿಸಿದ್ದ ಘಟನೆಯೂ ನಡೆದಿರುವುದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!