ಮಂಗಳೂರು: ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆ ಇಲ್ಲ- ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಸಾಕಷ್ಟು ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಯಾವುದೇ ಸಮಸ್ಯೆ ಇಲ್ಲ. ಸಾರ್ವಜನಿಕರು ಈ ಬಗ್ಗೆ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಅವರು ಬುಧವಾರ ತಮ್ಮ ಕಚೇರಿಯಲ್ಲಿ ವೈದ್ಯಕೀಯ ಆಮ್ಲಜನಕ ಪೂರೈಕೆದರರೊಂದಿಗೆ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಸರಕಾರಿ ಹಾಗೂ ಖಾಸಗೀ ಆಸ್ಪತ್ರೆಗಳಿಗೆ ಆಕ್ಸಿಜನ್ ಹಾಗೂ ಸಿಲಿಂಡರ್‍ಗಳು ನಿರಂತರವಾಗಿ ಪೂರೈಕೆಯಾಗಲು ಆಕ್ಸಿಜನ್ ತಯಾರಿಕಾ ಘಟಕಗಳಿಗೆ ಅವಶ್ಯವಿರುವ ಎಲ್ಲಾ ರೀತಿಯ ಪೂರಕ ನೆರವನ್ನು ಜಿಲ್ಲಾಡಳಿತ ಒದಗಿಸಲಿದೆ. ಆಕ್ಸಿಜನ್ ತಯಾರಿಕಾ ಘಟಕಗಳಿಗೆ ಯಾವುದೇ ಅಡಚಣೆ ಇಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಮೆಸ್ಕಾಂಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಆಕ್ಸಿಜನ್ ಘಟಕಗಳಿಗೆ ಕೇರಳದ ಪಾಲಕ್ಕಾಡ್‍ನಿಂದ ಕಚ್ಚಾ ವಸ್ತುಗಳು ಪೂರೈಕೆಯಾಗುತ್ತಿವೆ. ಬಳ್ಳಾರಿ ತೋರಣಗಲ್‍ನಿಂದಲೂ ಕಚ್ಚಾ ವಸ್ತು ದೊರಕುತ್ತಿದ್ದು, ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ, ಅಲ್ಲಿಂದ ಜಿಲ್ಲೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಆಕ್ಸಿಜನ್ ತಯಾರಿಕಾ ಘಟಕಗಳು ಮೊದಲು ಆಸ್ಪತ್ರೆಗಳಿಗೆ ಆದ್ಯತೆಯಲ್ಲಿ ಸರಬರಾಜು ಮಾಡಬೇಕು. ನಂತರವಷ್ಟೇ ಕೈಗಾರಿಕೆಗಳಿಗೆ ಸರಬರಾಜು ಮಾಡಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಆಕ್ಸಿಜನ್ ಪೂರೈಕೆಯಲ್ಲಿ ಏನೇ ಸಮಸ್ಯೆಗಳು ಎದುರಾದರೂ ತನ್ನ ಗಮನಕ್ಕೆ ತರುವಂತೆ ತಿಳಿಸಿದರು.
ಸಭೆಯಲ್ಲಿ ಸಹಾಯಕ ಔಷಧ ನಿಯಂತ್ರಕ ರಮಾಕಾಂತ್, ಆಕ್ಸಿಜನ್ ಪೂರೈಕೆ ಘಟಕಗಳ ಉದ್ಯಮಿಗಳು ಉಪಸ್ಥಿತರಿದ್ದರು.