ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಜಗದೀಶ್

ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂದಪಟ್ಟ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಜಿಲ್ಲಾಧಿಕರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ , ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂದಪಟ್ಟ ಬಾಕಿ ಇರುವ ಕಾಮಗಾರಿಗಳ ಪ್ರಗತಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಂದಾಪುರದ ಪ್ಲೈ ಓವರ್ ಕಾಮಗಾರಿ , ಮೂರ್‌ಕೈ ಬಳಿಯ ಅಂಡರ್‌ಪಾಸ್ ಕಾಮಗಾರಿ, ಪಡುಬಿದ್ರೆಯ ಬ್ರಿಡ್ಜ್ ಕಾಮಗಾರಿ ವಿಳಂಬ ಕುರಿತಂತೆ ಸಾರ್ವಜನಿಕರಿಂದ ಪದೇ ಪದೇ ದೂರುಗಳು , ಮನವಿಗಳು ಸಲ್ಲಿಕೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಉತ್ತರಿಸಬೇಕಿದೆ , ಯಾವಾಗ ಕಾಮಗಾರಿ ಮುಕ್ತಾಯಗೊಂಡು, ಸಾರ್ವಜನಿಕ ಬಳಕೆಗೆ ಮುಕ್ತವಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿ, ಪ್ರಸ್ತುತ ಮಳೆ ಸಹ ಕಡಿಮೆಯಾಗಿದೆ, ಕೋವಿಡ್ ನಿಂದ ಊರುಗಳಿಗೆ ತೆರಳಿದ್ದ ಕಾರ್ಮಿಕರೂ ಸಹ ಆಗಮಿಸುತ್ತಿದ್ದು, ಕಾಮಗಾರಿ ಮುಕ್ತಾಯಗೊಳಿಸಲು ಏನು ತೊಂದರೆಯಿದೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.


ಈ ಬಗ್ಗೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಇದೇ ನವೆಂಬರ್ ಅಂತ್ಯದೊಳಗೆ ಕುಂದಾಪುರದ ಪ್ಲೈ ಓವರ್ ಸಂಪೂರ್ಣ ಮುಕ್ತಾಯ ಗೊಳಿಸಲಾಗುವುದು, ಮತ್ತು ಮೂರ್ ಕೈ ನ ಅಂಡರ್ ಪಾಸ್ ಹಾಗೂ ಪಡುಬಿದ್ರೆ ಬ್ರಿಡ್ಜ್ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಮುಕ್ತಾಯ ಗೊಳಿಸಲಾಗುವುದು ಎಂದರು. ಮೂರ್‌ಕೈ ಅಂಡರ್ ಪಾಸ್ ಬಳಿ ನೀರು ನಿಲ್ಲುವ ಕುರಿತಂತೆ ಕುಂದಾಪುರ ಉಪವಿಭಾಗಾಧಿಕಾರಿಗಳೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿ,ಕಾಮಗಾರಿ ಕೈಗೊಳ್ಳುವಂತೆ ಡಿಸಿ ಸೂಚಿಸಿದರು.


ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈಗಾಗಲೇ ಗುರುತಿಸಲಾಗಿರುವ 32 ಬ್ಲಾಕ್ ಸ್ಪಾಟ್ ಗಳಲ್ಲಿ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಕಡೆಗಳಲ್ಲಿ ಬೀದಿ ದೀಪ ಆನ್ ಆಗುತ್ತಿಲ್ಲ ಈ ಬಗ್ಗೆ ಪರಿಶೀಲಿಸಿ, ಪಾಟ್ ಹೋಲ್‌ಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚುವಂತೆ ಜಿ.ಜಗದೀಶ್ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ 169ಎ ಗೆ ಸಂಬಂದಿಸಿದಂತೆ ಪರ್ಕಳ ಬಳಿಯಲ್ಲಿನ ಅಪಾಯಕಾರಿ ಗುಂಡಿಗಳಿದ್ದು ಎಲ್ಲಾ ಗುಂಡಿಗಳನ್ನು ಶೀಘ್ರದಲ್ಲಿ ಮುಚ್ಚುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಇಂದ್ರಾಳಿಯ ರೈಲ್ವೆ ಬ್ರಿಡ್ಜ್ ಕಾಮಗಾರಿ ಕುರಿತಂತೆ ನೀಡುವಂತೆ ಸೂಚಿಸಿದರು.


ಇಂದ್ರಾಳಿಯ ರೈಲ್ವೆ ಬ್ರಿಡ್ಜ್ ಕಾಮಗಾರಿ ಕುರಿತ ವಿನ್ಯಾಸವನ್ನು ಐಐಟಿ ಮದ್ರಾಸ್ ನ ಪರಿಶೀಲನೆಗೆ ಕಳುಹಿಸಲಾಗಿದ್ದು, ಅಲ್ಲಿಂದ ಪರಿಶೀಲನೆಯಾಗಿ ಬಂದ ವಿನ್ಯಾಸವನ್ನು ಮುಂಬೈನ ಕೊಂಕಣ ರೈಲ್ವೆ ಕಚೇರಿಗೆ ಕಳುಹಿಸಲಾಗಿದೆ, ಅನುಮೋದನೆ ಬಂದ ಕೂಡಲೇ ಕಂಪೋಸಿಟ್ ಸ್ಟೀಲ್ ಬಿಡ್ಜ್ ಕಾಮಗಾರಿ ಆರಂಭಿಸಲಾಗುವುದು, ಏಪ್ರಿಲ್ 2021ರೊಳಗೆ ರಾಷ್ಟ್ರೀಯ ಹೆದ್ದಾರಿ 169ಎ ಗೆ ಸಂಬಂದಿಸಿದ ಎಲ್ಲಾ ಕಾಮಗಾರಿಗಳನ್ನು ಮುಕ್ತಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಥ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪ ವಿಭಾಗಾಧಿಕಾರಿ ರಾಜು, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ತಾಲೂಕುಗಳ ತಹಸೀಲ್ದಾರ್ ಗಳು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!