ಸುಶಾಂತ್ ಸಾವು ಪ್ರಕರಣ: ರಿಯಾ ಚಕ್ರವರ್ತಿಗೆ ಸೆ.22ರ ವರೆಗೆ ನ್ಯಾಯಾಂಗ ಬಂಧನ
ಮುಂಬೈ: ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆತನ ಗೆಳತಿ, ನಟಿ ರಿಯಾ ಚಕ್ರವರ್ತಿ ಅವರನ್ನು ಸ್ಥಳೀಯ ಕೋರ್ಟ್ ಸೆಪ್ಟೆಂಬರ್ 22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ(ಎನ್ ಸಿ ಬಿ) ರಿಯಾ ಅವರನ್ನು ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಇಂದು ನಟಿಯನ್ನು ಬಂಧಿಸಿತ್ತು. ಬಳಿಕ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರುಪಡಿಸಲಾಯಿತು.
ರಿಯಾ ಚಕ್ರವರ್ತಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ಸೆಪ್ಟೆಂಬರ್ 22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದೇ ವೇಳೆ ಜಾಮೀನು ಕೋರಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ನಟಿ ರಿಯಾ ಡ್ರಗ್ಸ್ ಮಾಫಿಯಾ ಜತೆ ನಂಟು ಹೊಂದಿದ್ದು, ತನ್ನ ಗೆಳೆಯ ಸುಶಾಂತ್ ಸಿಂಗ್ ಗಾಗಿ ಡ್ರಗ್ಸ್ ಸಂಗ್ರಹಿಸಿದ್ದಳು ಎಂದು ಎನ್ ಸಿಬಿ ಆರೋಪಿಸಿದೆ. ಆದರೆ ಆರೋಪಿಯನ್ನು ತಾನು ಈಗಾಗಲೇ ವಿಚಾರಣೆ ನಡೆಸಿದ್ದು, ತನ್ನ ವಶಕ್ಕೆ ಪಡೆಯುವ ಅಗತ್ಯ ಇಲ್ಲ ಎಂದು ಕೋರ್ಟ್ ಗೆ ತಿಳಿಸಿದೆ.