ಸೆ.21ರಿಂದ 9 -12ನೇ ತರಗತಿ ಆರಂಭ: ಮಾರ್ಗಸೂಚಿ ಬಿಡುಗಡೆ
ನವದೆಹಲಿ: 9ನೇ ತರಗತಿಯಿಂದ 12ನೇ ತರಗತಿವರೆಗೆ ಇದೇ 21ರಿಂದ ಸ್ವಯಂ ಪ್ರೇರಿತವಾಗಿ ಭಾಗಶಃ ಶಾಲೆ ಆರಂಭಿಸುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳು ನೋಟ್ ಪುಸ್ತಕ, ಪೆನ್–ಪೆನ್ಸಿಲ್, ನೀರಿನ ಬಾಟಲಿ ಮೊದಲಾದವುಗಳನ್ನು ಪರಸ್ಪರ ಹಂಚಿಕೊಳ್ಳುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಗುಂಪುಗೂಡುವಿಕೆ, ಪ್ರಾರ್ಥನೆ ಮತ್ತು ಕ್ರೀಡಾ ಚಟುವಟಿಗಳನ್ನೂ ನಿಷೇಧಿಸಲಾಗಿದೆ.
ಶಾಲೆಗೆ ಬರುವ ಶಿಕ್ಷಕರು, ಇತರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಮಾರ್ಗಸೂಚಿ ಪ್ರಕಾರ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳ ನಡುವೆ ಆರು ಅಡಿ ಅಂತರವನ್ನು ಕಾಪಾಡಿಕೊಳ್ಳಬೇಕು. ಉಸಿರಾಟದ ಶಿಷ್ಟಾಚಾರಗಳನ್ನು ಅನುಸರಿಸುವುದು, ಆರೋಗಾ ಸೇತು ಆ್ಯಪ್ ಡೌನ್ ಲೋಡ್ ಮಾಡುವುದು ಮತ್ತು ಉಗುಳುವುದು ನಿಷೇಧಿಸುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.
ಆದಾಗ್ಯೂ, ಆನ್‌ಲೈನ್ ಮತ್ತು ದೂರಶಿಕ್ಷಣ ಮುಂದುವರಿಯುತ್ತದೆ ಮತ್ತು ಅದನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರ ಲಿಖಿತ ಒಪ್ಪಿಗೆ ಪತ್ರ ಕೂಡ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ.
ವಿದ್ಯಾರ್ಥಿ ಮತ್ತು ಶಿಕ್ಷರ ನಡುವಿನ ಸಂವಾದ ವ್ಯವಸ್ಥಿತ ಕ್ರಮದಲ್ಲಿರಬೇಕು ಎಂದೂ ಸಚಿವಾಲಯ ಸೂಚಿಸಿದೆ.