‘ಬಿಜೆಪಿ ಪಾಲಿಗೆ ಉದ್ಯಮಿ ಗೌತಮ್ ಅದಾನಿಯೇ ಪವಿತ್ರ ಗೋವು’ ರಾವುತ್ ವ್ಯಂಗ್ಯ
ನವದೆಹಲಿ, ಫೆ 09: ಬಿಜೆಪಿ ಪಾಲಿಗೆ ಉದ್ಯಮಿ ಗೌತಮ್ ಅದಾನಿಯೇ ಪವಿತ್ರ ಗೋವು ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಲೇವಡಿ ಮಾಡಿದ್ದಾರೆ.
ಫೆ.14ರಂದು ಪ್ರೇಮಿಗಳ ದಿನ ಆಚರಿಸುವ ಬದಲಿಗೆ ಗೋವುಗಳನ್ನು ಅಪ್ಪಿಕೊಳ್ಳುವ ದಿನ ಎಂದು ಆಚರಿಸುವಂತೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ-ಹೈನುಗಾರಿಕೆ ಸಚಿವಾಲಯದ ಅನಿಮಲ್ ವೆಲ್ ಫೇರ್ ಬೋರ್ಡ್ ಹೊರಡಿಸಿರುವ ಅಧಿಸೂಚನೆ ಬಗ್ಗೆ ವ್ಯಂಗ್ಯವಾಡಿರುವ ಅವರು, ಬಿಜೆಪಿಗೆ ಅದಾನಿಯೇ ಪವಿತ್ರವಾದ ಗೋವು. ಅವರನ್ನೇ ತಬ್ಬಿಕೊಂಡಿದ್ದಾರೆ. ನಾವು ಮಾತ್ರ ಪ್ರೇಮಿಗಳ ದಿನದಂದು ಬೇರೆ ಗೋವುಗಳನ್ನು ತಬ್ಬಿಕೊಳ್ಳಲು ಬಿಜೆಪಿ ಹೇಳುತ್ತಿದೆ ಎಂದರು.ಅದಾನಿ ಕಂಪೆನಿಗಳ ವಿರುದ್ದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು ವಂಚನೆ ಆರೋಪಗಳನ್ನು ಬಹಿರಂಗಪಡಿಸಿದೆ. ಆದರೆ ಈ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿ ಅಥವಾ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ವಹಿಸಬೇಕಿತ್ತಾದರೂ, ಬಿಜೆಪಿ ಹಾಗೆ ಮಾಡಿಲ್ಲ. ಏಕೆಂದರೆ ಅವರ ಪಾಲಿನ ಪವಿತ್ರ ಗೋವು ಅದಾನಿ ಎಂದು ಕಿಡಿ ಕಾರಿದರು. ಗೋಮಾತೆಯನ್ನು ಸದಾ ಗೌರವಿಸುವ ನಮಗೆ ಅದರ ಮೇಲೆ ಪ್ರೀತಿ ತೋರಿಸಲು ವಿಶೇಷ ದಿನ ಬೇಕಾಗಿಲ್ಲ ಎಂದೂ ಇದೇ ವೇಳೆ ಅವರು ಹೇಳಿದರು.