ರಾಜ್ಯದ 6 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ 3,582 ಕೋಟಿ ರೂ. ಮಂಜೂರು- ನಿತಿನ್ ಗಡ್ಕರಿ
ಬೆಂಗಳೂರು: ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಒಟ್ಟು 3,582 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ, ಕನಮಡಿ ಬಿಜ್ಜರಗಿ ಟಿಕೋಟಾ ಸೆಕ್ಷನ್ನಲ್ಲಿ (ಬಿಜಾಪುರ) ದ್ವಿಪಥ ರಸ್ತೆಯ ಅಗಲೀಕರಣಕ್ಕೆ 196.05 ಕೋಟಿ ರೂಪಾಯಿ. ಇಪಿಸಿ ಮಾದರಿಯಲ್ಲಿ ವಿಜಯಪುರ ಕಲಬುರ್ಗಿಯ ಮಹಾರಾಷ್ಟ್ರ ಗಡಿಭಾಗದ ರಾಹೆ-548ಬಿಗೆ ಸೇರುವ ಮುರುಂನಿಂದ ಐಬಿ ಸರ್ಕಲ್ವರೆಗಿನ ದ್ವಿಪಥ ರಸ್ತೆಯ ಅಗಲೀಕರಣ ಯೋಜನೆಗೆ 957.09 ಕೋಟಿ ರೂಪಾಯಿ ಅನುದಾನ.
ಕೊಪ್ಪಳ ಮತ್ತು ಗದಗ್ನಲ್ಲಿ ರಾಹೆ-367ರ ಗಡ್ಡನಕೇರಿ ಸೆಕ್ಷನ್ನಲ್ಲಿ ಕುಕುನೂರ, ಯಲಬುರ್ಗ, ಗಜೇಂದ್ರಗಡದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಯೋಜನೆಗೆ 333.96 ಕೋಟಿ ರೂ. ಹಾಗೂ ಬಾಗಲಕೋಟೆ ಜಿಲ್ಲೆ ರಾಹೆ-367: ಸರ್ಜಾಪುರದಿಂದ ಪಟ್ಟದಕಲ್ಲು ರಸ್ತೆ ಅಗಲೀಕರಣ ಯೋಜನೆಗೆ 445.62 ಕೋಟಿ ರೂಪಾಯಿ ಬಿಡುಗಡೆ.
ಮೈಸೂರು ಜಿಲ್ಲೆಯ ಕುಶಾಲನಗರ ಬೈಪಾಸ್‌ನ ಪ್ರಾರಂಭದಲ್ಲಿ ಗುಡ್ಡೆಹೊಸೂರು ಬಳಿಯ NH-275 ರ ಕುಶಾಲನಗರ ಭಾಗದವರೆಗೆ ಮೈಸೂರಿನಿಂದ ಸುಸಜ್ಜಿತ ನಾಲ್ಕು ಪಥ ರಸ್ತೆ ಅಗಲೀಕರಣ ಯೋಜನೆಗೆ 909.86 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮಂಜೂರು ಮಾಡಲಾಗಿದೆ. ಅಲ್ಲದೆ ಮೈಸೂರಿಗೆ ಹೆಚ್ಚುವರಿಯಾಗಿ 739.39 ಕೋಟಿ ರೂ. ನೀಡಲಾಗಿದ್ದು ಯಲವಾಲ ಕೆಆರ್ ನಗರ ರಸ್ತೆ ಜಂಕ್ಷನ್ನಲ್ಲಿ ನಾಲ್ಕು ಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ.
ಯೋಜನೆಗೆ ಅನುದಾನ ಮಂಜೂರು ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಹಿಂದೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮೈಸೂರು-ಕುಶಾಲನಗರ ಹೆದ್ದಾರಿಗೆ ₹ 4,000 ಕೋಟಿ ವೆಚ್ಚದ ಅನುದಾನ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಹಲವು ಬಾರಿ ಮನವಿ ಮಾಡಿದ್ದರು.