ಅಬುಧಾಬಿ: 184 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎಂಜಿನ್‌ನಲ್ಲಿ ಬೆಂಕಿ- ಪೈಲಟ್’ನ ಸಮಯಪ್ರಜ್ಞೆ ತಪ್ಪಿದ ದೊಡ್ಡ ದುರಂತ!
ಕಲ್ಲಿಕೋಟೆ, ಫೆ 03: ಅಬುಧಾಬಿಯಿಂದ ಕೇರಳದ ಕಲ್ಲಿಕೋಟೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲೇ ಮತ್ತೆ ವಿಮಾನ ಇಳಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಅಬುದಾಬಿಯಿಂದ ಇಂದು ಬೆಳಿಗ್ಗೆ ಒಟ್ಟು 184 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕಲ್ಲಿಕೋಟೆಗೆ ಟೇಕಾಫ್ ಆಗಿತ್ತು. 1000 ಅಡಿ ಎತ್ತರ ಹೋದಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಪೈಲಟ್ ವಿಮಾನವನ್ನು ಅಬುಧಾಬಿಗೆ ತಿರುಗಿಸಿ ಇಳಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದರು.
ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತಿಳಿಸಿದ್ದಾರೆ. ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿ ಕೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 1000 ಅಡಿಗಳಷ್ಟು ಎತ್ತರ ಹೋದಾಗ ನಂ.1 ಎಂಜಿನ್ ಫ್ಲೇಮ್ಔಟ್‌ನಿಂದ ಏರ್ಟರ್ನ್ಬ್ಯಾಕ್ನಲ್ಲಿ ಬೆಂಕಿ ಕಾಣಿಸಿತು ಎಂದು ತಿಳಿಸಿದೆ.