ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಸಮಾಜದ ಸಹಕಾರ ಅಗತ್ಯ: ಕನ್ಯಾನ ಸದಾಶಿವ ಶೆಟ್ಟಿ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸದೃಢ ಬೆಳವಣಿಗೆಗೆ ಸಮಾಜದ ಸಹಕಾರ ಅಗತ್ಯ. ಇಂದು ಎಲ್ಲರ ಸಹಕಾರ ಪ್ರೋತ್ಸಾಹದಿಂದ ಪಟ್ಲ ಫೌಂಡೇಶನ್ ಟ್ರಸ್ಟ್ ಬೆಳೆದು ನಿಂತಿದೆ. ಯಕ್ಷಗಾನವನ್ನು ಒಂದು ಉನ್ನತ ಮತ್ತು ಗೌರವ ಸ್ಥಾನಕ್ಕೆ ಕೊಂಡೊಯ್ಯಲು ಪಟ್ಲ ಸತೀಶ ಶೆಟ್ಟಿಯವರ ಕೊಡುಗೆಯೂ ದೊಡ್ಡದಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು.

ನಗರದ ಎಂಪೇರ್ ಮಾಲ್ ನಲ್ಲಿ ನಡೆದ ಪಟ್ಲಾಶ್ರಯ ಯೋಜನೆಯಲ್ಲಿ ಐದು ಮಂದಿ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ ತಲಾ ಎರಡು ಲಕ್ಷ ರೂಪಾಯಿಯ ಚೆಕ್ ಗಳನ್ನು ವಿತರಿಸಿ ಅವರು ಮಾತನಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಳೆದ ಏಳು ವರ್ಷಗಳಿಂದ ಸುಮಾರು ಎಂಟೂವರೆ ಕೋಟಿ ರೂ. ಮೊತ್ತದ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕೆಲಸ ಮಾಡಿದೆ ಎಂದರು.

ಸಮಾರಂಭದಲ್ಲಿ ಬಡಗುತಿಟ್ಟಿನ ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್, ಕಟೀಲು ಮೇಳದ ಕಲಾವಿದ ಶ್ರೀಧರ ಪಡ್ರೆ, ಕಟೀಲು ಮೇಳದ ಸುಖೇಶ್ ಹೆಗ್ಡೆ, ಹವ್ಯಾಸಿ ಮಹಿಳಾ ಯಕ್ಷಗಾನ ಕಲಾವಿದೆ ಮಲ್ಲಿಕಾ, ತೆಂಕುತಿಟ್ಟಿನ‌ ಯಕ್ಷಗುರು ದೇವಿಪ್ರಸಾದ್ ಇವರಿಗೆ ತಲಾ ಎರಡು ಲಕ್ಷ ರೂಪಾಯಿಯ ಚೆಕ್ ಗಳನ್ನು ಕನ್ಯಾನ ಸದಾಶಿವ ಶೆಟ್ಟಿ ಮತ್ತು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಸುಮಾರು 5 ಲಕ್ಷದಷ್ಟು ಸಹಾಯಧನವನ್ನು ಆರೋಗ್ಯ ಯೋಜನೆಯಡಿ ವೈದ್ಯಕೀಯ ಚಿಕಿತ್ಸೆಗಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ್ ರೈ, ಜೊತೆ ಕಾರ್ಯದರ್ಶಿ ರವಿ ಚಂದ್ರ ಶೆಟ್ಟಿ ಅಶೋಕನಗರ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಜಗನ್ನಾಥ ಶೆಟ್ಟಿ ಬಾಳ, ಮಹಿಳಾ ಘಟಕದ ಗೌರವಾಧ್ಯೆಕ್ಷೆ ಆರತಿ ಆಳ್ವ, ಅಧ್ಯೆಕ್ಷೆ ಪೂರ್ಣಿಮಾ ಯತೀಶ್ ರೈ, ಸುಮಂಗಲ ರಾವ್, ಅಶ್ವಿತ್ ಶೆಟ್ಟಿ ಉದ್ಯಮಿ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ‌ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!