ಉಡುಪಿ ನಗರಸಭಾ ವ್ಯಾಪ್ತಿಯ ಕೊನೆಗೊಳ್ಳದ ಡ್ರೈನೇಜ್ ಅವ್ಯವಸ್ಥೆ- ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ

ಉಡುಪಿ ಜ.31 (ಉಡುಪಿ ಟೈಮ್ಸ್ ವರದಿ): ನಗರದ ಹಲವಡೆ ರಸ್ತೆ ಮಧ್ಯದಲ್ಲಿ ಟ್ರಾಫಿಕ್ ಸಿಗ್ನಲ್ ಗಾಗಿ ಗುಂಡಿಗಳನ್ನು ತೋಡಿ ವ್ಯವಸ್ಥೆ ಮಾಡಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿರುವುದರ ಜೊತೆಗೆ ಅಪಘಾತ ಸಂಖ್ಯೆಗಳು ಕೂಡ ಹೆಚ್ಚಾಗುತ್ತದೆ ಎಂದು ನಗರಸಭೆಯ ವಿಪಕ್ಷ ಸದಸ್ಯೆ ಅಮೃತ ಕೃಷ್ಣಮೂರ್ತಿ ಅವರು ನಗರ ಸಭೆಯ ಸಾಮಾನ್ಯ ಸಭೆಯ ಗಮನಕ್ಕೆ ತಂದರು.

ಇಂದು ಉಡುಪಿ ನಗರ ಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರು, ಉಡುಪಿ ನಗರಸಭೆಯ ಡಯಾನ ಸರ್ಕಲ್, ಹಳೆ ತಾಲೂಕು ಕಚೇರಿಯ ಮುಂಭಾಗದ ರಸ್ತೆ ಹಾಗೂ ಇತರ ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಗಾಗಿ ರಸ್ತೆ ಮಧ್ಯೆ ರಸ್ತೆಯನ್ನು ಅಗೆದು ಸಿಗ್ನಲ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇದು ವಾಹನ ಸವಾರರಿಗೆ ಮಾರ್ಗದರ್ಶನ ನೀಡಲು ಮಾಡುತ್ತಿರುವ ವ್ಯವಸ್ಥೆಯಾದರೂ ಇದರಿಂದ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ ಇದರ ಬಗ್ಗೆ ನಗರಸಭೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಅವರು ನಿನ್ನೆ ಇದೆ ರೀತಿಯ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯಿಂದಾಗಿ ನಗರದಲ್ಲಿ ಉಂಟಾದ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನ ತಾವೇ ಖುದ್ದು ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಕೂಡಾ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.

ಈ ವೇಳೆ ಅಮೃತ ಕೃಷ್ಣಮೂರ್ತಿ ಅವರ ಮಾತಿಗೆ ಸದಸ್ಯ ರಮೇಶ್ ಕಾಂಚನ್ ಅವರು ಕೂಡ ಧ್ವನಿಗೂಡಿಸಿ ಈ ರಸ್ತೆಗಳಲ್ಲಿ ಸಾಮಾನ್ಯವಾಗಿ ಬಸ್ಸುಗಳು ಚಲಿಸುವುದೇ ಕಷ್ಟದಲ್ಲಿ ಹೀಗಿರುವಾಗ ಟ್ರಾಫಿಕ್ ಸಿಗ್ನಲ್ ಗೆಂದು ಗುಂಡಿಗಳನ್ನು ಅಗೆದಿರುವುದರಿಂದ  ವಾಹನ ಸವಾರರಿಗೆ ಮತ್ತಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ನಗರ ಸಭೆ ಗಮನ ಹರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ನಗರಸಭಾ ವ್ಯಾಪ್ತಿಯ ಡ್ರೈನೇಜ್ ಸಮಸ್ಯೆ ಬಗ್ಗೆ ಕೂಡ ಚರ್ಚೆ ನಡೆದಿದ್ದು, ಚರಂಡಿ ನೀರಿನಿಂದಾಗಿ ಜಲಚರಗಳಿಗೆ ಹಾನಿಯಾಗುತ್ತಿದೆ ಇದರಿಂದ ಜಲಚರಗಳ ಸಂತತಿ ನಾಶವಾಗುವ ಭೀತಿ ಕೂಡ ಉಂಟಾಗುತ್ತಿದೆ ಎಂದು ಆಡಳಿತ ಪಕ್ಷದ ಸುಂದರ್ ಕಲ್ಮಾಡಿ ಹಾಗೂ ವಿಜಯ್ ಕೊಡವೂರು ಅವರು ಅವರು ನಗರಸಭೆಯ ಗಮನಕ್ಕೆ ಹಾಗೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಯನ್ನು ಕೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ಉದಯ್ ಶೆಟ್ಟಿ ಅವರು, ಡ್ರೈನೇಜ್ ಸಮಸ್ಯೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಾಂತ್ರಿಕ ಪರಿಣಿತರ ವರದಿಗಳು ಲಭ್ಯವಾಗಿದ್ದು, ಸ್ಲೆಝ್ ತೆರವು ಗೊಳಿಸಲು 95,45,000 ರೂ. ಅಂದಾಜು ಪಟ್ಟಿಯನ್ನ ಸಿದ್ದಪಡಿಸಲಾಗಿದೆ. ಇದರೊಂದಿಗೆ ಇನ್ನಿತರ ದುರಸ್ತಿಯ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ನಗರಾಭಿವೃದ್ಧಿ ಇಲಾಖೆ ಶೀಘ್ರ ಸಭೆ ನಡೆಸಿ ಈ ಸಮಸ್ಯೆ ನಿವಾರಣೆಗೆ ತ್ವರಿತವಾಗಿ ಹಣಕಾಸು ಬಿಡುಗಡೆ ಮಾಡುವ ಭರವಸೆ ನೀಡಿದರು. ಆದ್ದರಿಂದ ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಈ ಕಾರ್ಯವನ್ನು ಹಂತ ಹಂತವಾಗಿ ಮಾಡಬೇಕಾಗಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಈ ಸಮಸ್ಯೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದೇ ವೇಳೆ ಸದಸ್ಯ ರಮೇಶ್ ಕಾಂಚನ್ ಅವರು ಉಡುಪಿ ನಗರ ಸಂಪರ್ಕಿಸುವ ಪರ್ಕಳ, ಪರಂಪಳ್ಳಿ, ಇಂದ್ರಾಳಿ ಮತ್ತು ಬೈಲೂರಿನ ರಸ್ತೆ ಕಾಮಗಾರಿಗಳು ಅಪೂರ್ಣವಾಗಿದ್ದು, ನಿಧಾನಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ ಬಗ್ಗೆ ವಿಷಯ ಪ್ರಸಾಸಿ, ಈ ಕಾಮಗಾರಿಗಳ ಪ್ರಗತಿ ಬಗ್ಗೆ ನಗರಸಭೆಯಿಂದ ಮಾಹಿತಿ ಕೋರಿದರು.

ಒಂದೋ ನಮಗೆ ವಿಷ ಕೊಡಿ ಇಲ್ಲವೇ ಸಮಸ್ಯೆಯನ್ನು ಬಗೆಹರಿಸಿ ಎಂದು ಉಡುಪಿ ನಗರಸಭಾ ಸದಸ್ಯ ಸುಂದರ್ ಕಲ್ಮಾಡಿ ಅಳಲು: ಇಂದ್ರಾಳಿ ನದಿ ಸಂಪೂರ್ಣ ಕಲುಷಿತವಾಗಿ ನಾಗರಿಕರಿಗೆ ಸಮಸ್ಯೆಯಾಗಿದೆ. ಪರಿಸರದಲ್ಲಿ ಮೀನುಗಳ ಮಾರಣ ಹೋಮವಾಗುತ್ತಿದೆ. ಮತ್ತೊಂದೆಡೆ ನದಿ ನೀರು ಡಾಮಾರ್ ನಂತಾಗಿದೆ. ಯುಜಿಡಿ ಮತ್ತು ಎಸ್ಟಿಪಿ ಯ ಅವ್ಯವಸ್ಥೆಯಿಂದಾಗಿ ನದಿ ನೀರು ಕಲುಷಿತವಾಗಿದೆ. ಜನರು ನಗರಸಭೆಯನ್ನು ದೂರುತ್ತಿದ್ದಾರೆ. ಈ ಸಭೆಯಲ್ಲಿ ಹೇಳಲಾಗದಂತಹ ಪದದಲ್ಲಿ ನಮಗೆ ಬಯ್ಯುತ್ತಿದ್ದಾರೆ. ಒಂದಾ ನಮಗೆ ವಿಷ ಕೊಡಿ, ಇಲ್ಲದಿದ್ದರೆ ಸಮಸ್ಯೆ ಪರಿಹರಿಸಿ ಎಂದು ನಗರಸಭೆಯನ್ನು ಸುಂದರ್ ಕಲ್ಮಾಡಿ ಆಗ್ರಹಿಸಿದ್ದಾರೆ. ಸಭೆಯಲ್ಲಿ ಶಾಸಕ ರಘುಪತಿ ಭಟ್, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!