ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ಹೆಚ್ಚಳ- ಬಂಗಾರ, ಬೆಳ್ಳಿ ದುಬಾರಿ.!- ಯಾವುದು ಅಗ್ಗ?
ನವದೆಹಲಿ, ಫೆ 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನಲ್ಲಿ ಚಿನ್ನಾಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ. ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂಗಳ ಬೆಲೆ ಇನ್ಮುಂದೆ ದುಬಾರಿಯಾಗಲಿದೆ.
2023-24ನೇ ಸಾಲಿನ ಬಜೆಟ್‌ನಲ್ಲಿ ಈ ಅಂಶವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದು, ಚಿನ್ನಾಭರಣಗಳು ಬೆಲೆ ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ ಬೆಲೆ ದುಬಾರಿಯಾಗಲಿದೆ ಎಂದು ಹೇಳಿದ್ದಾರೆ.ಇನ್ನು ವಿದೇಶೀ ವಾಹನಗಳ ಆಮದು ಶುಲ್ಕವೂ ದುಬಾರಿಯಾಗಲಿದೆ. ಅಲ್ಲದೆ ರೆಡಿಮೇಟ್ ಬಟ್ಟೆ ಬೆಲೆ ಏರಿಕೆಯಾಗಲಿದೆ ಎಂದೂ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆಯಾಗಲಿದೆ. ಮೊಬೈಲ್ ಫೋನ್, ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದುಗೊಳ್ಳಲಿದ್ದು, ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆಯಾಗಲಿದೆ. ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಕಡಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2023: ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ7 ಲಕ್ಷ ರೂ.ಗೆ ಹೆಚ್ಚಳ:
ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ 7ಲಕ್ಷ ಆದಾಯದವರೆಗೆ ತೆರಿಗೆ ವಿನಾಯ್ತಿಯನ್ನು ವಿಸ್ತರಿಸಿದೆ.
ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗದವರಿಗೆ ಪ್ರತಿಫಲ ಸಿಗಲೆಂದು ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತರುತ್ತಿದ್ದು, ಅದರಡಿ 7 ಲಕ್ಷದವರೆಗೆ ವೈಯಕ್ತಿಕ ಆದಾಯ ಮಿತಿಯವರೆಗೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಹೇಳಿದರು.
9 ಲಕ್ಷ ಆದಾಯದವರೆಗೆ ಶೇಕಡಾ 5ರಷ್ಟು ತೆರಿಗೆ ಮತ್ತು 15 ಲಕ್ಷ ಆದಾಯ ಹೊಂದಿರುವವರಿಗೆ ಶೇಕಡಾ 10ರಷ್ಟು ತೆರಿಗೆ ಹೇರಲಾಗುವುದು ಎಂದು ಪ್ರಕಟಿಸಿದರು.
ಇದುವರೆಗೆ 5 ಲಕ್ಷ ರೂಪಾಯಿ ಆದಾಯದವರೆಗೆ ತೆರಿಗೆ ವಿನಾಯ್ತಿಯನ್ನು ನೀಡಲಾಗುತ್ತಿತ್ತು. ಆದಾಯ ತೆರಿಗೆ ರಿಟರ್ನ್ಸ್ ಪ್ರಕ್ರಿಯೆಯ ಅವಧಿಯನ್ನು 16 ದಿನಗಳವರೆಗೆ ಕಡಿಮೆ ಮಾಡಲಾಗಿದೆ ಎಂದರು.
ಹೊಸ ತೆರಿಗೆ ಪದ್ಧತಿಯಲ್ಲಿ ಅತಿ ಹೆಚ್ಚು ಸರ್ಚಾರ್ಜ್ ದರವನ್ನು 37% ರಿಂದ 25% ಕ್ಕೆ ಇಳಿಸಲು ಸರ್ಕಾರವು ಪ್ರಸ್ತಾಪಿಸಿದೆ ಎಂದರು.ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆಯ (Monthly income scheme – MIS) ಹೂಡಿಕೆ ಮಿತಿಯನ್ನು 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು 4.5 ಲಕ್ಷ ಹೂಡಿಕೆಗೆ ಮಾತ್ರ ಅವಕಾಶವಿತ್ತು.
ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ 30 ಲಕ್ಷಕ್ಕೆ ಕೇಂದ್ರ ಸರ್ಕಾರವು ವಿಸ್ತರಿಸಿದೆ.
ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟಿಸಿದೆ. 2 ವರ್ಷಗಳ ಅವಧಿಯ ಈ ಯೋಜನೆಗೆ ಶೇಕಡಾ 7.5 ಬಡ್ಡಿ ನಿಗದಿಪಡಿಸಲಾಗಿದೆ.
ಸುಲಭವಾಗಿ ಐಟಿ ರಿಟರ್ನ್ಸ್ ಸಲ್ಲಿಸಲು ಸರ್ಕಾರ ಹೊಸ ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್‌ಗಳನ್ನು ಪರಿಚಯಿಸಿದೆ ಎಂದರು.
ಜಗತ್ತಿನಲ್ಲಿ ಅತಿ ಹೆಚ್ಚು ವೈಯಕ್ತಿಕ ತೆರಿಗೆ ದರ: ಪ್ರಸ್ತುತ ಅತಿ ಹೆಚ್ಚು ವೈಯಕ್ತಿಕ ತೆರಿಗೆ ದರ 42% ವಿಶ್ವದಲ್ಲೇ ಅತ್ಯಧಿಕವಾಗಿದೆ. ಅತಿ ಹೆಚ್ಚು ಆದಾಯ ಗಳಿಸುವವರಿಗೆ ಸರ್ಚಾರ್ಜ್ ನ್ನು 37% ರಿಂದ 25% ಕ್ಕೆ ಇಳಿಸಲಾಗಿದೆ. ಹೆಚ್ಚಿನ ತೆರಿಗೆ ದರವನ್ನು ಶೇಕಡಾ 39ಕ್ಕೆ ಇಳಿಸಲಾಗಿದೆ.
ಆದಾಯ ತೆರಿಗೆ ವಿನಾಯ್ತಿ, ಹೊಸ ಸ್ಲ್ಯಾಬ್ಗಳ ವಿವರ ಹೀಗಿದೆ ಹೊಸ ತೆರಿಗೆ ಪದ್ಧತಿ (New Tax Regime) ಆದಾಯ ತೆರಿಗೆ ವಿನಾಯ್ತಿ ಮೊತ್ತವನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಚಿವರು ಭರವಸೆನೀಡಿದರು. ತೆರಿಗೆ ವಿವರಗಳನ್ನು ನೀಡಿದರು. ವಾರ್ಷಿಕ ₹ 9 ಲಕ್ಷ ವೇತನ ಪಡೆಯುವವರು ₹ 45,000 ತೆರಿಗೆ ಕಟ್ಟುತ್ತಾರೆ ಎಂದು ಸಚಿವರು ಹೇಳಿದರು. ಹೊಸ ತೆರಿಗೆ ದರಗಳು ಹೀಗಿವೆ… ₹ 3 ಲಕ್ಷದವರೆಗೆ – ಇಲ್ಲ ₹ 3ರಿಂದ 6 ಲಕ್ಷ – ಶೇ 5 ₹ 6ರಿಂದ 9 ಲಕ್ಷ – ಶೇ 10 ₹ 9ರಿಂದ 12 ಲಕ್ಷ – ಶೇ 15 ₹ 12ರಿಂದ 15 ಲಕ್ಷ – ಶೇ 20 ₹ 15 ಲಕ್ಷಕ್ಕೂ ಹೆಚ್ಚು –ಶೇ 30
ಮೂಲಸೌಕರ್ಯ ಮತ್ತು ಹೂಡಿಕೆಯಲ್ಲಿ ಬಜೆಟ್ 2023ರಲ್ಲಿ ಆದ್ಯತೆ-ಹಣಕಾಸು ಸಚಿವೆ
ಅಂತರ್ಗತ ಅಭಿವೃದ್ಧಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಯುವ ಸಬಲೀಕರಣ, ಮೂಲಸೌಕರ್ಯ ಮತ್ತು ಹೂಡಿಕೆ, ಹಸಿರು ಬೆಳವಣಿಗೆ ಮತ್ತು ಹಣಕಾಸು ಕ್ಷೇತ್ರವು 2023-24ರ ಕೇಂದ್ರ ಬಜೆಟ್‌ನಲ್ಲಿ ಪಟ್ಟಿ ಮಾಡಲಾದ ಆದ್ಯತೆಗಳಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
63,000 ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳನ್ನು 2,561 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಗಣಕೀಕರಣಗೊಳಿಸಲಾಗುತ್ತಿದೆ. PACS ಗಾಗಿ ಮಾದರಿ ಬೈಲಾಗಳನ್ನು ರೂಪಿಸಲಾಗಿದೆ, ರಾಷ್ಟ್ರೀಯ ಡೇಟಾಬೇಸ್ ಅನ್ನು ಸಿದ್ಧಪಡಿಸಲಾಗುತ್ತಿದೆ, ಇದರೊಂದಿಗೆ ಬೃಹತ್ ವಿಕೇಂದ್ರೀಕೃತ ಶೇಖರಣಾ ಸಾಮರ್ಥ್ಯವನ್ನು ಸ್ಥಾಪಿಸಲಾಗುವುದು
ಬಜೆಟ್ 2023 ರ ಬಜೆಟ್ ನ ಏಳು ಆದ್ಯತೆಗಳು
1. ಅಂತರ್ಗತ ಅಭಿವೃದ್ಧಿ
2. ಕೊನೆಯ ಮೈಲಿಯವರೆಗೂ ಸಂಪರ್ಕ
3. ಮೂಲಸೌಕರ್ಯ ಮತ್ತು ಹೂಡಿಕೆ
4. ಸುಪ್ತ ಸಾಮರ್ಥ್ಯವನ್ನು ಹೊರಹಾಕುವುದು
5. ಹಸಿರು ಬೆಳವಣಿಗೆ
6. ಯುವ ಶಕ್ತಿ
7. ಹಣಕಾಸು ವಲಯವನ್ನು ಬಲಪಡಿಸುವುದು