ಪ್ರವೀಣ್ ನೆಟ್ಟಾರು ಸಾವಿನ ಸೇಡಿಗಾಗಿ ಫಾಜಿಲ್‌ ಹತ್ಯೆ- ಶರಣ್ ಪಂಪ್‌ವೆಲ್ ವಿರುದ್ಧ ದೂರು ದಾಖಲಿಸಿದ ಫಾಜಿಲ್ ತಂದೆ

ಮಂಗಳೂರು: ಮಂಗಳೂರು ಸಮೀಪದ ಸುರತ್ಕಲ್‌ನಲ್ಲಿ ಬರ್ಬರವಾಗಿ ಹತ್ಯೆಗೀಡಾದ ಫಾಜಿಲ್‌ನ ತಂದೆ ಫಾರೂಕ್ ಅವರು ಸೋಮವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರಿಗೆ ದೂರು ಸಲ್ಲಿಸಿದ್ದು, ಸಾರ್ವಜನಿಕ ಯಾತ್ರೆಯಲ್ಲಿ ‘ಪ್ರವೀಣ್ ನೆಟ್ಟಾರು ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹಿಂದೂ ಕಾರ್ಯಕರ್ತರು ಫಾಜಿಲ್‌ನನ್ನು ಹತ್ಯೆ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಫಾರೂಕ್, ತನ್ನ ಮಗನ ಹತ್ಯೆಯ ಹಿಂದಿರುವವರನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದ್ದಾರೆ. ನಮಗೆ ಈ ಮೊದಲು ಅನುಮಾನವಿತ್ತು. ಆದರೆ, ಈಗ ಅವರೇ ನನ್ನ ಮಗನನ್ನು ಕೊಂದಿದ್ದಾರೆ ಎಂಬುದು ಶರಣ್ ಪಂಪ್‌ವೆಲ್ ಹೇಳಿಕೆ ನೀಡಿದ ಮೇಲೆ ಸ್ಪಷ್ಟವಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನನಗೆ ನ್ಯಾಯ ಬೇಕು ಮತ್ತು ಶರಣ್ ವಿರುದ್ಧ ಯುಎಪಿಎ ಮೊಕದ್ದಮೆ ಹೂಡುವಂತೆ ಪೊಲೀಸರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು. ಈ ಹಿಂದೆ ವಿಎಚ್‌ಪಿಯ ಶೌರ್ಯ ಯಾತ್ರೆ ವೇಳೆ ಮಾತನಾಡಿದ್ದ ಶರಣ್ ಪಂಪ್‌ವೆಲ್, ಅಗತ್ಯ ಬಿದ್ದರೆ ಭಜರಂಗದಳ ಹೋರಾಟ ಮಾಡುತ್ತದೆ, ಕೆಲವೊಮ್ಮೆ ‌ನಾವು ನುಗ್ಗಿ ಹೊಡೆಯುತ್ತೇವೆ. ಪ್ರವೀಣ್ ನೆಟ್ಟಾರು ‌ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು. ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ ಬೇಸರ ಪಟ್ಟಿತ್ತು. ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ. ನಮ್ಮ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಸೇಡು ತೀರಿಸಿಕೊಳ್ಳಲು ಸುರತ್ಕಲ್​ಗೆ‌ ಹೋಗಿ ನುಗ್ಗಿ ನುಗ್ಗಿ ಹೊಡೆದರು. ಅದು ನಮ್ಮ ಶೌರ್ಯ. ಸುರತ್ಕಲ್​ನಲ್ಲಿ ಹೊಡೆದ ವಿಡಿಯೋವನ್ನು ನೀವು ಎಲ್ಲರು ನೋಡಲೇಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!