ಶ್ರೀನಗರ: ಕೊರೆಯುವ ಚಳಿಯಲ್ಲೂ ರಾಹುಲ್ ಗಾಂಧಿ ಸ್ವೆಟರ್ ಧರಿಸಲಿಲ್ಲ ಯಾಕೆ ಗೊತ್ತಾ…!
ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ವೇಳೆ ಕೊರೆಯುವ ಚಳಿಯಲ್ಲೂ ತಾವು ಸ್ವೆಟರ್ ಧರಿಸದಿರುವುದರ ಹಿಂದಿನ ಸೀಕ್ರೆಟ್ ಅನ್ನು ಸೋಮವಾರ ಬಹಿರಂಗಪಡಿಸಿದ್ದಾರೆ.
ಯಾತ್ರೆ ವೇಳೆ ತಾವು ಭೇಟಿಯಾದ ನಾಲ್ಕು ಮಕ್ಕಳ ಕಥೆಯನ್ನು ವಿವರಿಸಿದ ರಾಹುಲ್ ಗಾಂಧಿ, ಆ ನಾಲ್ಕು ಮಕ್ಕಳು ಭಿಕ್ಷುಕರಾಗಿದ್ದು, ಕೊರೆಯುವ ಚಳಿಯಲ್ಲೂ ಅವರು ಯಾವುದೇ ಸ್ವೆಟರ್ ಧರಿಸಿರಲಿಲ್ಲ. ಅವರಿಗೆ ತಿನ್ನಲು ಅವರಿಗೆ ಆಹಾರ ಕೂಡ ಇದ್ದಿಲ್ಲ ಅನಿಸುತ್ತೆ. ಇದು ಯಾತ್ರೆಯ ಸಮಯದಲ್ಲಿ ನಾನು ಸ್ವೆಟರ್ ಧರಿಸದಂತೆ ಪ್ರೇರೇಪಿಸಿತು ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “…ನಾಲ್ಕು ಮಕ್ಕಳು ನನ್ನ ಬಳಿಗೆ ಬಂದರು, ಅವರು ಭಿಕ್ಷುಕರು ಮತ್ತು ಸರಿಯಾಗಿ ಬಟ್ಟೆಯೇ ಧರಿಸಿರಲಿಲ್ಲ … ನಾನು ಅವರನ್ನು ತಬ್ಬಿಕೊಂಡೆ … ಅವರು ಚಳಿಯಿಂದ ನಡುಗುತ್ತಿದ್ದರು. ಆಗ ನಾನು ಕೂಡ ಜಾಕೆಟ್‌ಗಳು ಅಥವಾ ಸ್ವೆಟರ್‌ಗಳು ಧರಿಸಬಾರದು ಎಂದು ನಿರ್ಧರಿಸಿದೆ…” ಎಂದಿದ್ದಾರೆ.
ಯಾತ್ರೆಯ ಸಮಯದಲ್ಲಿ ತಾವು ಭೇಟಿಯಾದ ಒಬ್ಬ ಯುವತಿಯ ಕಥೆಯನ್ನು ವಿವರಿಸಿದ ಕಾಂಗ್ರೆಸ್ ನಾಯಕ, ಅವಳು ನನಗೆ ಓದಲು ಒಂದು ಪತ್ರ ಕೊಟ್ಟಳು. ಅದರಲ್ಲಿ ನನ್ನ ಮೊಣಕಾಲು “ನೋವಿನ ಬಗ್ಗೆ” ಬರೆದಿದ್ದಳು.
ಇನ್ನು, ಯಾತ್ರೆಯ ವೇಳೆ ನಾನು ಬಹಳಷ್ಟು ಕಲಿತಿದ್ದೇನೆ. ಒಂದು ದಿನ ನಡೆಯುತ್ತಿದ್ದಾಗ ನಾನು ಬಹಳ ದಣಿದಿದ್ದೆ. ನಾನಿನ್ನೂ 6 ರಿಂದ 7 ಗಂಟೆಗಳ ಕಾಲ ನಡೆಯಬೇಕಿತ್ತು. ನನ್ನಿಂದ ಆಗಲ್ಲ ಎಂದುಕೊಂಡಿದ್ದೆ. ಆದರೆ, ಒಂದು ಚಿಕ್ಕ ಹುಡುಗಿ ನನ್ನ ಬಳಿ ಓಡಿ ಬಂದು ತಬ್ಬಿಕೊಂಡು ನನಗಾಗಿ ಏನೋ ಬರೆದಿದ್ದೇನೆ ಎಂದು ಕೊಟ್ಟು ಹೋದಳು. ನಾನು ಅದನ್ನು ಓದುತ್ತಾ ನಿಂತೆ, ನನ್ನ ದಣಿವು ಮಾಯವಾಗಿತ್ತು ಎಂದು ಹೇಳಿದರು.
ಆ ಹುಡುಗಿ ನಿಮ್ಮ ಮೊಣಕಾಲು ನೋಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದು ನಿಮ್ಮ ಮುಖದಲ್ಲಿ ಕಾಣುತ್ತಿದೆ. ನಾನು ನಿಮ್ಮೊಂದಿಗೆ ನಡೆಯಲು ಸಾಧ್ಯವಿಲ್ಲ. ಆದರೆ, ನನಗಾಗಿ ಮತ್ತು ನನ್ನ ಭವಿಷ್ಯಕ್ಕಾಗಿ ನೀವು ನಡೆಯುತ್ತಿರುವುದರಿಂದ ನಾನು ನನ್ನ ಹೃದಯದೊಂದಿಗೆ ನಿಮ್ಮ ಜೊತೆ ನಡೆಯುತ್ತೇನೆ ಎಂದು ಬರೆದಿದ್ದಳು. ಆ ಪತ್ರ ಓದಿದ ಕ್ಷಣವೇ ನನ್ನ ನೋವು ಮಾಯವಾಗಿತ್ತು ಎಂದು ರಾಹುಲ್ ಗಾಂಧಿ ತಮ್ಮ ಯಾತ್ರೆಯ ಅನುಭವವನ್ನು ಹಂಚಿಕೊಂಡರು.