ಅಮೆರಿಕ ಸಂಸ್ಥೆಯ ವರದಿಗೆ ನಡುಗಿದ ಅದಾನಿ ಗ್ರೂಪ್- ಪೇರು ಪೇಟೆಯಲ್ಲಿ ರೂ.10.73 ಲಕ್ಷ ಕೋಟಿ ನಷ್ಟ
ನವದೆಹಲಿ: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಏಷ್ಯಾದ ನಂ.1 ಶ್ರೀಮಂತ ಉದ್ಯಮಿ ಅದಾನಿ ಒಡೆತನದ ಕಂಪನಿಗಳು ಭಾರೀ ಅಕ್ರಮ ಎಸಗಿವೆ ಎಂದು ವರದಿ ನೀಡಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿರುವ ಅದಾನಿ ಮಾಲೀಕತ್ವದ ಎಲ್ಲಾ ಕಂಪನಿಗಳು ತೀವ್ರ ಕುಸಿತ ಕಂಡಿವೆ.
ಹಿಂಡನ್ಬರ್ಗ್ ರಿಸರ್ಚ್ ವರದಿ ಷೇರು ಮಾರುಕಟ್ಟೆ ಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಶುಕ್ರವಾರದಂದೂ ಸಾವಿರಾರು ಷೇರುದಾರರು ವ್ಯಾಪಕ ನಷ್ಟದ ಹೊರತಾಗಿಯೂ ಅದಾನಿ ಷೇರು ಕಂಪನಿಗಳ ಷೇರುಗಳ ಮಾರಾಟದಲ್ಲಿ ತೊಡಗಿದ್ದಾರೆ.
ಅದಾನಿ ಗ್ರೀನ್ ಎನರ್ಜಿ (ಶೇ.20), ಅದಾನಿ ಟೋಟಲ್ ಗ್ಯಾಸ್ (ಶೇ.20), ಅದಾನಿ ಪೋರ್ಟ್ಸ್& ಎಕನಾಮಿಕ್ ಝನ್ (ಶೇ.16.29), ಅದಾನಿ ಎಂಟರ್ಪ್ರೈಸಸ್ (18.57%), ಅದಾನಿ ಟ್ರಾನ್ಸ್ಮಿಷನ್ (20%), ಅದಾನಿ ಪವರ್ (5%) ಮತ್ತು ಅದಾನಿ ವಿಲ್ಮಾರ್ (5%) ಕಂಪನಿಗಳ ಮಾರುಕಟ್ಟೆ ಬಂಡವಾಳ ತೀವ್ರ ಪ್ರಮಾಣದಲ್ಲಿ ಕರಗಿದೆ. ಅದಾನಿ ಪಾಲುದಾರಿಕೆ ಹೊಂದಿರುವ ಅಂಬುಜಾ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಷೇರುಗಳೂ ಕುಸಿತ ಕಂಡಿವೆ. ಮುಂದಿನ ವಾರವೂ ಅದಾನಿ ಮಾರುಕಟ್ಟೆ ಬಂಡವಾಳ ಕರಗುವ ಲಕ್ಷಣಗಳು ಗೋಚರಿಸಿದ್ದು, ಹೂಡಿಕೆದಾರರ ಆತಂಕ ದುಪ್ಪಟ್ಟು ಗೊಳಿಸಿದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಏಳು ಕಂಪನಿಗಳ ಮಾರುಕಟ್ಟೆ ಮೌಲ್ಯವು ಒಂದೇ ದಿನದಲ್ಲಿ 2.5 ಲಕ್ಷ ಕೋಟಿ ರೂ ಕರಗಿದೆ.
2020ರ ಬಳಿಕ ಅದಾನಿ ಸಮೂಹ ಕಂಡ ಅತಿಹೆಚ್ಚು ಪ್ರಮಾಣದ ದೈನಂದಿನ ಕುಸಿತ ಇದಾಗಿದೆ. ಎರಡು ದಿನಗಳಲ್ಲಿ ಅದಾನಿ ಸಮೂಹ ಸಂಸ್ಥೆಗಳು ತಮ್ಮ ಮಾರುಕಟ್ಟೆ ಮೌಲ್ಯದಿಂದ 4,17,824.79 ಕೋಟಿ ರೂ. ಗಳಷ್ಟು ನಷ್ಟ ಅನುಭವಿಸಿವೆ. ಅದಾನಿ ಟೋಟಲ್ ಗ್ಯಾಸ್ನ ಮಾರುಕಟ್ಟೆ ಮೌಲ್ಯ 1,04,580.93 ಕೋಟಿ ರೂ. ಕುಸಿದಿದ್ದರೆ, ಅದಾನಿ ಟ್ರಾನ್ಸ್ಮಿಷನ್ ಮೌಲ್ಯ 83,265.95 ಕೋಟಿ ರೂ. ಇಳಿದಿದೆ. ಅದಾನಿ ಎಂಟರ್ಪ್ರೈಸಸ್ ಮಾರುಕಟ್ಟೆ ಬಂಡವಾಳ 77,588.47 ಕೋಟಿ ರೂ., ಅದಾನಿ ಗ್ರೀನ್ ಎನರ್ಜಿ 67,962.91 ಕೋಟಿ ರೂ. ಮತ್ತು ಅದಾನಿ ಪೋಟ್ಸ್ 35,048.25 ಕೋಟಿ ರೂ. ಕುಸಿದಿದೆ. ಅಂಬುಜಾ ಸಿಮೆಂಟ್ ಮಾರುಕಟ್ಟೆ ಮೌಲ್ಯ 23,311.47 ಕೋಟಿ ಅದಾನಿ ಪವರ್ 10,317.31 ಕೋಟಿ ರೂ., ಎಸಿಸಿ 8,490.8 ಕೋಟಿ ರೂ. ಇಳಿಕೆ ಕಂಡಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 874 ಅಂಶ ಇಳಿಕೆ ಕಂಡಿತು. ಒಂದು ತಿಂಗಳಿಗೂ ಹೆಚ್ಚಿನ ವಹಿವಾಟು ಅವಧಿಯಲ್ಲಿ ಒಂದು ದಿನದಲ್ಲಿ ಆಗಿರುವ ಗರಿಷ್ಠ ಕುಸಿತ ಇದಾಗಿದೆ. 59,331 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. 2021ರ ಅಕ್ಟೋಬರ್ ನಂತರದ ಕನಿಷ್ಠ ಮಟ್ಟಿ ಇದು. ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 1,230 ಅಂಶ ಕುಸಿತ ಕಂಡಿತ್ತು.
ಕುಸಿತಕ್ಕೆ ಕಾರಣ: ಅದಾನಿ ಸಮೂಹದ ಕಂಪನಿಗಳು ಮತ್ತು ಬ್ಯಾಂಕಿಂಗ್ ಷೇರುಗಳ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ವಹಿವಾಟುಗಳು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿಯುವಂತಾಯಿತು ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ರಿಟೇಲ್ ರಿಸರ್ಚ್ನ ಉಪ ಮುಖ್ಯಸ್ಥ ದೇವರ್ಷ್ ವಕೀಲ್ ಹೇಳಿದ್ದಾರೆ.
ಕೇಂದ್ರ ಬಜೆಟ್ ಮತ್ತು ಅಮೆರಿಕದ ಫೆಡರಲ್ ರಿಸರ್ವ್ನ ಸಭೆಯ ಕಾರಣಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸಿದರು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.
‘ವಹಿವಾಟುದಾರರು 2 ಪ್ರಮುಖ ವಿದ್ಯಮಾನಗಳ ಬಗ್ಗೆ ಹೆಚ್ಚು ಗಮನ ಹರಿಸಲಿದ್ದಾರೆ. ಮೊದಲನೆಯದು 2023–24ನೇ ಸಾಲಿನ ಕೇಂದ್ರ ಬಜೆಟ್ ಫೆಬ್ರುವರಿ 1ರಂದು ಮಂಡನೆ ಆಗಲಿರುವುದು. ಎರಡನೆಯದು, ಅಮೆರಿಕದ ಫೆಡರಲ್ ರಿಸರ್ವ್ ಫೆಬ್ರುವರಿ 1ರಂದು ಬಡ್ಡಿದರದ ಕುರಿತು ನಿರ್ಧಾರ ತೆಗೆದುಕೊಳ್ಳಲಿರುವುದು’ ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್ನ ಹಿರಿಯ ಉಪಾಧ್ಯಕ್ಷ ಪ್ರಶಾಂತ್ ತಾಪ್ಸೆ ಹೇಳಿದ್ದಾರೆ.
ರೂ.10.73 ಲಕ್ಷ ಕೋಟಿ ನಷ್ಟ:
ದೇಶದ ಷೇರುಪೇಟೆಗಳಲ್ಲಿ ಎರಡು ದಿನಗಳಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಬಂಡವಾಳ ಮೌಲ್ಯವು 10.73 ಲಕ್ಷ ಕೋಟಿಗೂ ಹೆಚ್ಚು ಕರಗಿದೆ. ಬಿಎಸ್ಇ ಒಟ್ಟು ಮೌಲ್ಯವು ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ 269.65 ಲಕ್ಷ ಕೋಟಿಗೆ ಇಳಿಕೆ ಕಂಡಿತು.