ಪೊಲೀಸ್ ಭದ್ರತೆ ಸಂಪೂರ್ಣ ವಿಫಲವಾದ ಕಾರಣ ಯಾತ್ರೆ ರದ್ದು-ಕಾಶ್ಮೀರದಲ್ಲಿ ರಾಹುಲ್ ಗಾಂಧಿ
ಖಾನಬಾಲ್: ದುರದೃಷ್ಟವಶಾತ್ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾದ ಕಾರಣ ಈ ದಿನದ ಭಾರತ್ ಜೋಡೋ ಯಾತ್ರೆಯನ್ನು ರದ್ದುಗೊಳಿಸಬೇಕಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಪಾದಯಾತ್ರೆ ಸ್ಥಗಿತಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷರು ರಾಹುಲ್ ಗಾಂಧಿ, ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸ್ ಸಿಬ್ಬಂದಿ ಎಲ್ಲಿಯೂ ಕಾಣಲಿಲ್ಲ ಎಂದು ಆರೋಪಿಸಿದ್ದಾರೆ.
“ಭದ್ರತೆ ಒದಗಿಸುವುದು ಜಮ್ಮು-ಕಾಶ್ಮೀರ ಆಡಳಿತದ ಜವಾಬ್ದಾರಿಯಾಗಿದೆ. ಯಾತ್ರೆಯ ಉಳಿದ ದಿನಗಳಲ್ಲಿ ಭದ್ರತೆ ಖಾತರಿಪಡಿಸಲಾಗುವುದು ಎಂದು ಭಾವಿಸುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ನನ್ನ ಭದ್ರತಾ ಸಿಬ್ಬಂದಿಯ ಸಲಹೆ ವಿರುದ್ಧ ಹೋಗಲು ಸಾಧ್ಯವಿಲ್ಲದ ಕಾರಣ ನಾನು ಇಂದು ನನ್ನ ನಡಿಗೆಯನ್ನು ರದ್ದುಗೊಳಿಸಬೇಕಾಯಿತು” ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.
ಮುಂದಿನ ಕೆಲವು ದಿನಗಳವರೆಗೆ ಯಾತ್ರೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಹುಲ್ ಗಾಂಧಿಯವರ ಭದ್ರತಾ ತಂಡ, ಜಮ್ಮು ಮತ್ತು ಕಾಶ್ಮೀರ ಆಡಳಿತದೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಅವರ ಪಕ್ಷದ ಸಹೋದ್ಯೋಗಿ ಜೈರಾಮ್ ರಮೇಶ್ ಹೇಳಿದ್ದಾರೆ.