ಕಟ್ಟಡ ತ್ಯಾಜ್ಯ, ಮಣ್ಣು ಹಗಲು ಸಾಗಾಟ ಮಾಡಿದರೆ ಲೈಸನ್ಸ್ ರದ್ದು: ಆಯುಕ್ತರ ಎಚ್ಚರಿಕೆ

ಮಂಗಳೂರು ಸೆ. 07: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯೊಳಗಿನ ಕಟ್ಟಡ ನಿರ್ಮಾಣ ಸ್ಥಳದ ಭೂ ಅಗೆತದಿಂದ ತೆಗೆಯಲಾದ ಮಣ್ಣನ್ನು ಮತ್ತು ಹಳೆ ಕಟ್ಟಡ ಕೆಡವುದರಿಂದ ಉಂಟಾದ ಅವಶೇಷಗಳನ್ನು ವಿಲೇವಾರಿಗೊಳಿಸಲು ತೆರೆದ ಲಾರಿ ಮೂಲಕ ಹಗಲು ಹೊತ್ತಿನಲ್ಲಿ ಸಾಗಾಟ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಈ ರೀತಿ ಸಾಗಾಟದಿಂದ ಉಂಟಾದ ಧೂಳಿನಿಂದ ವಾಯು ಮಾಲಿನ್ಯವಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

ಅಲ್ಲದೆ ರಸ್ತೆಗಳಲ್ಲಿ ಬೀಳುತ್ತಿರುವ ಮಣ್ಣಿನಿಂದ ವಾಹನಗಳು ಜಾರಿ ಹೋಗಿ ಅಪಘಾತ ಪ್ರಕರಣಗಳು ಸಂಭವಿಸಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ.  ಇಂತಹ ಚಟುವಟಿಕೆಗಳು ಮುನಿಸಿಪಲ್ ಕಾಯಿದೆಯನ್ವಯ ಕಾನೂನು ಬಾಹಿರವಾಗಿದ್ದು, ರಸ್ತೆ ಸುರಕ್ಷತೆ ಕಾಯಿದೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ.  


 ಆದುದರಿಂದ ಇನ್ನು ಮುಂದೆ ಯಾವುದೇ ತರದ ಮಣ್ಣು ಸಾಗಾಟವನ್ನು ಹಾಗೂ ಕಟ್ಟಡಗಳ ಅವೇಶಷಗಳನ್ನು ಕಡ್ಡಾಯವಾಗಿ ಮುಚ್ಚಿದ ಲಾರಿಗಳ ಮೂಲಕ ರಾತ್ರಿ ವೇಳೆಯಲ್ಲಿ ಸಾಗಾಟ ಮಾಡುವಂತೆ ಕಟ್ಟು ನಿಟ್ಟಿನ ನಿರ್ದೇಶನ ನೀಡಲಾಗಿದೆ.  ಒಂದು ವೇಳೆ ಇದನ್ನು ಉಲ್ಲಂಘಿಸುವ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸಂಬಂಧಪಟ್ಟವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಅವರಿಂದ  ಕಟ್ಟಡ ಮತ್ತು ಭಗ್ನಾವಶೇಷ ನಿರ್ವಹಣಾ ನಿಯಮ 2016 ರಂತೆ ರಸ್ತೆ ಸ್ವಚ್ಛತೆಯ ವೆಚ್ಚವನ್ನು ವಸೂಲು ಮಾಡಲಾಗುವುದು. ಅಲ್ಲದೇ, ಅಂತಹ ಸ್ಥಳದಲ್ಲಿ ಕಟ್ಟಡ ನಿರ್ಮಾಣದ ಪರವಾನಿಗೆಯನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!