ದ.ಕ- ಉಡುಪಿಯ ಐದು ಟೋಲ್ ಗೇಟುಗಳಲ್ಲಿ ದಿನನಿತ್ಯ ಹಗಲು ದರೋಡೆ: ಯೋಗೀಶ್ ಶೆಟ್ಟಿ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇವಲ 93 ಕಿಲೋ ಮೀಟರ್ ಅಂತರಲ್ಲಿ ಇರುವ ಐದು ಟೋಲ್ ಗೇಟುಗಳಲ್ಲಿ ದಿನನಿತ್ಯ ಹಗಲು ದರೋಡೆ ನಡೆಯುತ್ತಿದೆ. ಭಾರತ ಸರಕಾರದ ಕಾನೂನು ಪ್ರಕಾರ ರಸ್ತೆ ನಿರ್ವಹಣಾ ಶುಲ್ಕ ಸಂಗ್ರಹಿಸುವ ಟೋಲ್ ಗೇಟುಗಳು 60 ಕಿಲೋ ಮೀಟರ್ ಅಂತರದಲ್ಲಿ ಇರಬಾರದು. ಹಾಗಿದ್ದರೂ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಐದು ಟೋಲ್ ಗೇಟುಗಳು ಎಲ್ಲಾ ವಾಹನ  ಚಾಲಕರಿಂದ ಹಣ ಸಂಗ್ರಹ ಮಾಡುತ್ತಿವೆ.


ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಅಕ್ರಮ ಟೋಲ್ ಗೇಟನ್ನು ತೆಗೆದು ಹಾಕುತ್ತೇನೆ ಎಂದು ಘೋಷಣೆ ಮಾಡಿದವರು ಇದೀಗ ಆಡಳಿತ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದಾರೆ.  ಹಾಗಿದ್ದರೂ ಹಗಲು ದರೋಡೆ ನಡೆಯುತ್ತಲೇ ಇದೆ. ಇದು ಹೇಗೆ ಸಾಧ್ಯ. ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಟೋಲ್‍ಗೇಟ್ ನಡುವಿನ ಕನಿಷ್ಟ ಅಂತರ ಅರವತ್ತು ಕಿಲೋ ಮೀಟರ್ ಇರಲೇಬೇಕು. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಹಾದುಹೋಗುವ ಕೇರಳ- ಗೋವಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಲ್ಕು ಟೋಲ್ ಗೇಟುಗಳು ಇವೆ.


ಕೇರಳ ಗಡಿ ಪ್ರದೇಶ ತಲಪಾಡಿಯಿಂದ ಗೋವಾ ರಾಜ್ಯ ಗಡಿ ತನಕ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪಾಡಿಯಿಂದ ಕುಂದಾಪುರ ತಾಲೂಕಿನ ಸಾಸ್ತಾನ ನಡುವೆ ನಾಲ್ಕು ಟೋಲ್ ಗೇಟುಗಳನ್ನು ಹಾಕಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ನಂತೂರು ವೃತ್ತದಿಂದ ಸುರತ್ಕಲ್ ತನಕ ಹಳೆಯ ಗುತ್ತಿಗೆಯಲ್ಲಿ ನಾಲ್ಕು ಪಥಗಳ ರಸ್ತೆ ನಿರ್ಮಾಣ ಮಾಡಲಾಗಿದೆ. ಒಂದು ತುಂಡನ್ನು ಹೊರತು ಪಡಿಸಿದ ಗೋವಾ ಗಡಿ ತನಕದ ಹೆದ್ದಾರಿಯನ್ನು ನಾಲ್ಕು ಪಥಗಳ ಹೆದ್ದಾರಿಯಾಗಿ ಪರಿವರ್ತಿಸಿ ಸರ್ವೀಸ್ ರಸ್ತೆ ನಿರ್ಮಿಸುವ ಯೋಜನೆಯನ್ನು ಆಂಧ್ರಪ್ರದೇಶ ಮೂಲದ ನವಯುಗ್ ಉಡುಪಿ ಪ್ರೈವೆಟ್ ಲಿಮಿಟೆಡ್ ವಹಿಸಿಕೊಂಡಿದೆ. ಬಂಡವಾಳ ಹೂಡಿಕೆ ಮತ್ತು ಕಾಮಗಾರಿ ಅನುಷ್ಠಾನ ನಡೆಸಿ ಟೋಲ್ ಸಂಗ್ರಹಿಸುವ ಒಪ್ಪಂದದ ಮೇರೆಗೆ ಈ ಕಾಮಗಾರಿ ನಡೆಯುತ್ತಿತು.


ಪಂಪ್ ವೆಲ್ ಸರ್ಕಲ್ ಕಾಮಗಾರಿ ಸೇರಿದಂತೆ ಹೆದ್ದಾರಿ ಕಾಮಗಾರಿ ಶೇಕಡ 50ರಷ್ಟು ಮುಗಿಯುವ ಮುನ್ನವೇ ನವಯುಗ್ ಕಂಪೆನಿ ರಸ್ತೆ ಶುಲ್ಕ ಸಂಗ್ರಹಕ್ಕೆ ಟೋಲ್ ಗೇಟ್ ಪ್ಲಾಜ ಸ್ಥಾಪಿಸಿತ್ತು. ಟೋಲ್ ಸಂಗ್ರಹಿಸಬೇಕಾದರೆ ಹೆದ್ದಾರಿಯ ಕೆಲಸ ಕನಿಷ್ಟ 75% ಮುಗಿದಿರಬೇಕು. ಆದರೆ, ಸರಕಾರ ರಸ್ತೆ ಶುಲ್ಕ ಸಂಗ್ರಹಿಸಲು ಅನುಮತಿ ನೀಡಿತ್ತು.  ತಾತ್ಕಾಲಿಕ ಎಂಬ ನೆಲೆಯಲ್ಲಿ ಸುರತ್ಕಲ್ ಎನ್ ಐ ಟಿ ಕೆ ಬಳಿ ಮೊದಲ ಟೋಲ್ ಗೇಟ್, ಅನಂತರ ಪಡುಬಿದ್ರಿ ಸಮೀಪದ ಹೆಜಮಾಡಿ ಮತ್ತು ತಲಪಾಡಿಯಲ್ಲಿ ಹಾಗೂ ಅಂತಿಮವಾಗಿ ಕುಂದಾಪುರ ಸಾಸ್ತಾನ ಸಮೀಪದ ಗುಂಡ್ಮಿಯಲ್ಲಿ ಟೋಲ್ ಗೇಟ್ ಬಿತ್ತು. ಎಲ್ಲ ಟೋಲ್ ಗೇಟ್ ಸ್ಥಾಪನೆಗೂ ಮುನ್ನ ಸ್ಥಳೀಯರು ಪ್ರತಿಭಟನೆ ನಡೆದಿತ್ತು.ಉಡುಪಿ ಜಿಲ್ಲಾ ಜೆಡಿಎಸ್ ಪ್ರತಿಭಟನೆಯಲ್ಲಿ ಭಾಗಿಯಾಗಿತ್ತು ಸುರತ್ಕಲ್ ಟೋಲ್ ಗೇಟ್ ಆರಂಭಕ್ಕೂ ಮುನ್ನ ಭಾರತೀಯ ಜನತಾ ಪಾರ್ಟಿ ಸ್ಥಳೀಯವಾಗಿ ವಿರೋಧಿಸುವ ಉದ್ದೇಶದಿಂದ ಸಭೆ ನಡೆಸಿತ್ತು.

ಆದರೆ, ಆ ಸಭೆಯಲ್ಲಿ ಸ್ಥಾಪಿತ ಹಿತಾಸಕ್ತಿಗಳು ಟೋಲ್ ಗೇಟ್ ಸಂಗ್ರಹದ ಪರವಾಗಿ ಪರೋಕ್ಷ ವಕಾಲತ್ ಮಾಡಿದ ಪರಿಣಾಮ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಟೋಲ್ ಗೇಟ್ ವಿರೋಧಿಸಲು ಸಾಧ್ಯ ಆಗಲಿಲ್ಲ. ಅನಂತರ ಹಲವಾರು ಸಂಘಟನೆಗಳು ಉಡುಪಿ, ಸಾಸ್ತಾನ, ಹೆಜಮಾಡಿ, ಸುರತ್ಕಲ್, ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸುರತ್ಕಲ್ ಟೋಲ್ ಗೇಟ್ ತೆರವು ಮಾಡಲೇ ಬೇಕು ಎಂದು ಹಲವು ದಿನಗಳ ಕಾಲ ಪ್ರತಿಭಟನೆ ನಡೆಯಿತು. ಏಕೆಂದರೆ, ಸುರತ್ಕಲ್ NITK ಹಾಗೂ ಹೆಜಮಾಡಿ ನಡುವೆ ಹತ್ತು ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್‍ಗೇಟ್‍ಗಳಿವೆ. NITK ಸಮೀಪದ ಟೋಲ್ ಗೇಟ್ ತೆರವು ಮಾಡಲೇ ಬೇಕಾಗುತ್ತದೆ. 


ತಲಪಾಡಿ ಹಾಗೂ ಗುಂಡ್ಮಿಯ ನಡುವಿನ ಅಂತರ 95 ಕಿಲೋಮೀಟರ್. ಕಾನೂನು ಪ್ರಕಾರ ಈ ಅಂತರದಲ್ಲಿ ಎರಡು ಟೋಲ್‍ಗೇಟ್‍‍ಗಳಿಗೂ ಅವಕಾಶವಿಲ್ಲ. ನಾಲ್ಕು ಟೋಲ್‍ಗೇಟ್‍ಗಳು ಶುಲ್ಕ ಸಂಗ್ರಹಿಸುತ್ತಿವೆ. ಅಂದರೆ ಸರಾಸರಿ ಇಪ್ಪತ್ತಮೂರು ಕಿಲೋಮೀಟರಿಗೊಂದು ಟೋಲ್‍ಗೇಟ್ ಇದ್ದಂತಾಯಿತು. ಕರ್ನಾಟಕ ಕರಾವಳಿಯ ಕಾನೂನು ನಿಯಮಗಳು. ದೇಶದ ಎಲ್ಲಿಯೂ ಇಲ್ಲದ ಕಾನೂನು ಕರಾವಳಿ ಕರ್ನಾಟಕದಲ್ಲಿ ಚಲಾವಣೆಯಲ್ಲಿ ಇವೆ. ಇವೆರಡು ಯೋಜನೆಗಳ ಅವ್ಯವಸ್ಥೆ, ವೈಫಲ್ಯಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಮಾನ ಪಾಲುದಾರರು.
ಪ್ರಸ್ತುತ NITK ಟೋಲ್ ಗೇಟನ್ನು ಕೂಡಲೇ ತೆರವು ಮಾಡಬೇಕು ಮತ್ತು ಕುಂದಾಪುರದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ. ಅವೈಜ್ಞಾನಿಕವಾಗಿ ಕಟಪಾಡಿ, ಅಂಬಲಪಾಡಿಯಲ್ಲಿ ರಸ್ತೆ ನಿರ್ಮಿಸಿ ಅಪಘಾತಕ್ಕೆ ಕಾರಣವಾಗಿರುತ್ತದೆ. ಸರ್ವಿಸ್ ರಸ್ತೆ ಕಾಮಗಾರಿ ನಡೆಯಲೇ ಇಲ್ಲ.


ಮಂಗಳೂರು ,ಕುಂದಾಪುರ, ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಪಟ್ಟಣಗಳ ಡಿವೈಡರಗಳಲ್ಲಿ  ಅಪಘಾತ- ಅಪರಾಧಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುವ ದಾರಿ ದೀಪಗಳಲ್ಲಿ ಸುಮಾರು ಅರ್ಧ ಪ್ರಮಾಣದಷ್ಟು ಬೆಳಗುತ್ತಿಲ್ಲ .ಇದು ನಮ್ಮ ಅವಳಿ ಜಿಲ್ಲೆಗಳ ಅವ್ಯವಸ್ಥೆಯ ಆಗರವಾಗಿದೆ.ಇನ್ನಾದರೂ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸಬೇಕು,ಹೆಜಮಾಡಿ ಟೋಲ್ ಗೇಟ್ ನಲ್ಲಿ ನಡೆಯುವ ಗೂಂಡಾ ಸಂಸ್ಕೃತಿಯು ಕೂಡಲೇ ನಿಲ್ಲಬೇಕು, ಎಂದು  ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ  ಶೆಟ್ಟಿ ಅವರು ಸರಕಾರವನ್ನು ಆಗ್ರಹಿಸಿರುತ್ತಾರೆ. 

1 thought on “ದ.ಕ- ಉಡುಪಿಯ ಐದು ಟೋಲ್ ಗೇಟುಗಳಲ್ಲಿ ದಿನನಿತ್ಯ ಹಗಲು ದರೋಡೆ: ಯೋಗೀಶ್ ಶೆಟ್ಟಿ

  1. We are very intelligent people budivanta janaru
    Namage 23 alla 3 km nali toll iddaru yenu problem illa
    Yarige nivu kasta pattu article thayaru madidiri
    Thank you for your effefort

Leave a Reply

Your email address will not be published. Required fields are marked *

error: Content is protected !!