‘ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ’- ಸಚಿವ ಸುನಿಲ್‌ಕುಮಾರ್

ಬೆಂಗಳೂರು, ಜ 15: ಭರವಸೆ ಉಚಿತ, ಸಾಲ ಖಚಿತ’ ಇದು ಸಿದ್ದರಾಮಯ್ಯನವರ ಆಡಳಿತದಲ್ಲಿ ಜನರಿಗೆ ಸಿಗುವ ಉಡುಗೊರೆ ಎಂದು ಇಂಧನ ಹಾಗೂ ಕನ್ನಡ- ಸಂಸ್ಕ್ರತಿ ಸಚಿವ ವಿ. ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ “ವಿತ್ಥನೀತಿ” ಯನ್ನು ಸಿದ್ದರಾಮಯ್ಯನವರು ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ. ಸಾಲ ಎತ್ತುವಳಿಯನ್ನೇ ಬಂಡವಾಳ ಹೂಡಿಕೆ ಎಂದು ವ್ಯಾಖ್ಯಾನಿಸುವ ಅವರ ಭಂಡತನ ಅರ್ಥಶಾಸ್ತ್ರದ ಹೊಸ ವ್ಯಾಖ್ಯಾನವೇ ಸರಿ. ದಿವಾಳಿ ಹೊಂದುವುದನ್ನೇ ಪ್ರಧಾನ ಗುರಿಯಾಗಿಸಿಕೊಂಡ ಅರ್ಥ ವ್ಯವಸ್ಥೆಗೆ ನಿಮ್ಮ ನೀತಿ ಆದರ್ಶ ಎಂದು ಲೇವಡಿ ಮಾಡಿದ್ದಾರೆ.

ಕುತ್ತಿಗೆವರೆಗೆ ಮುಳುಗಿದ್ದ ಎಸ್ಕಾಂಗಳನ್ನು ಸಾಲದ ಹೊರೆಯಿಂದ ಮೇಲೆತ್ತಿದ್ದೇವೆ ಎಂದು ಬೆನ್ನು ಚಪ್ಪರಿಸಿ ಕೊಂಡಿದ್ದೀರಿ, ಸಂತೋಷ. ಸಮಕಾಲೀನ ರಾಜಕಾರಣದ “ಉತ್ತರಪುರುಷ” ಎಂದು ಬಿರುದಾಂಕಿತರಾದ ನಿಮ್ಮಿಂದ ಇಂಥ ಸುಳ್ಳು ಬಡಾಯಿಗಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವೇ? ನೀವು ಎಸ್ಕಾಂಗಳ ಮೇಲೆ ಹೊರಿಸಿ ಹೋದ ಸಾಲದ ಗಂಟನ್ನು ಇಳಿಸಿದ್ದು ನಾವು ಎಂದು ಸಚಿವ ಸುನಿಲ್‌ಕುಮಾರ್ ಹೇಳಿದ್ದಾರೆ.

ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಎಲ್‌ ಮೇಲಿನ 10203 ಕೋಟಿ ರೂ. ಸಾಲವೂ ಸೇರಿದಂತೆ 2015ರಿಂದ 2018ರ ಅವಧಿಯಲ್ಲಿ 33414.20 ಕೋಟಿ ಸಾಲದ ಗಂಟನ್ನು ಎಸ್ಕಾಂಗಳ ಮೇಲೆ ಹೊರಿಸಿದ್ದಿರಿ. ನೀವೇ ಸ್ಟೇರಿಂಗ್‌ ಹಿಡಿದು “ಸಮನ್ವಯ” ಸಾಧಿಸಿದ ಮೈತ್ರಿ ಸರ್ಕಾರದ ಕಾಲದಲ್ಲಿ 27,178 ಕೋಟಿ ರೂ. ಸಾಲದ ಹೊರೆ ಎಸ್ಕಾಂಗಳ ಮೇಲೆ ಬಿತ್ತು. ಆದರೆ ವಾಸ್ತವವನ್ನು ಮರೆ ಮಾಚುವುದಕ್ಕಾಗಿ ನೀವು ಸಾಲವನ್ನು ಬಂಡವಾಳ ಹೂಡಿಕೆ ಎಂದು ವ್ಯಾಖ್ಯಾನಿಸಿದ್ದೀರಿ. ಇಷ್ಟೊಂದು ಸಾಲ ಮಾಡಿದ ಮೇಲೆ ಹೊರೆ ಇಳಿಸಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುವ ನಿಮ್ಮ ಜ್ಞಾನನಿಧಿಯ ಬಗ್ಗೆ ಸಾಮಾನ್ಯ ಪ್ರಜೆಯೂ ಸರ್ವಾಂಗಗಳಿಂದಲೂ ಕನಿಕರ ವ್ಯಕ್ತಪಡಿಸಬಹುದು ಎಂದು ಕುಟುಕಿದ್ದಾರೆ.

ಈ ಕಾರಣಕ್ಕಾಗಿಯೇ ನೀವು ಕತ್ತಲೆಯಲ್ಲಿ ಬಜೆಟ್‌ ಓದಿದ ಸಂಗತಿಯನ್ನು ನಾನು ನೆನಪು ಮಾಡಿಕೊಂಡಿದ್ದೇನೆ. ನುಡಿದಂತೆ ನಡೆಯುವವರು ನಾವು ಎಂದು ಅತಿಯಾಗಿ ಬೆನ್ನು ತಟ್ಟಿಕೊಳ್ಳಬೇಡಿ. ನಿಮ್ಮ ನಡೆ-ನುಡಿಯೊಳಗಿನ ಕಾಪಟ್ಯ ಎಲ್ಲರಿಗೂ ಗೊತ್ತು. ಇದೇ ನನ್ನ ಕೊನೆಯ ಚುನಾವಣೆ ಎಂದು ಎಷ್ಟು ಬಾರಿ ನುಡಿದಿರಿ, ಎಷ್ಟು ಬಾರಿ ತಪ್ಪಿದಿರಿ? ರಾಜಕೀಯವಾಗಿ ಮರು ಜನ್ಮ ನೀಡಿದ ಬಾದಾಮಿಯನ್ನು ತ್ಯಜಿಸಿ ಕೋಲಾರಕ್ಕೆ ವಲಸೆ ಹೊರಟಿದ್ದೀರಿ. ಇದು ನುಡಿದಂತೆ ನಡೆಯುವ ಪರಿಯಾ? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಮಾತು, ಕೃತಿ ಒಂದು ರೀತಿಯಲ್ಲಿ ಹಸ್ತಿದಂತ ಇದ್ದಂತೆ. ಆನೆಗೆ ಇರುವುದು ಎರಡೇ ದಂತ ಎಂದು ಭಾವಿಸುವುದು ಎಷ್ಟು ಮೂರ್ಖತನವೋ,ಸಿದ್ದರಾಮಯ್ಯ ನವರ ನುಡಿಯಂತೆ ನಡೆ ಎಂಬುದು ಅಷ್ಟೇ ಅಪಾಯಕಾರಿ ಎಂದು ಸುನಿಲ್‌ಕುಮಾರ್ ಹೇಳಿದ್ದಾರೆ.ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ನೀಡಬೇಕಿದ್ದ ವಿದ್ಯುತ್‌ ಸಬ್ಸಿಡಿಯನ್ನೇ ಬಾಕಿ ಇಟ್ಟು ಹೋದ ಘನ ಸರ್ಕಾರ ತಮ್ಮದ್ದಾಗಿತ್ತು ಎಂಬುದನ್ನು ಮರೆಯದಿರಿ.

ಎಲ್ಲ ಆಯಾಮಗಳನ್ನು ಪರಿಶೀಲಿಸಿದಾಗ ನೀವು ಕೊಟ್ಟ ಉಚಿತ ವಿದ್ಯುತ್‌ ಭರವಸೆ ಈಡೇರಿಸುವುದಕ್ಕೆ ವಾರ್ಷಿಕ 9000 ಕೋಟಿ ರೂ. ಬೇಕಾಗುತ್ತದೆ. ಅಂದರೆ ವಾರ್ಷಿಕವಾಗಿ ಮತ್ತೆ 9000 ಕೋಟಿ ಸಾಲದ “ಹೂಡಿಕೆ” ಮಾಡುವ ಯೋಚನೆ ನಿಮ್ಮದಾಗಿದೆ. “ಭರವಸೆ ಉಚಿತ, ಸಾಲ ಖಚಿತ” ಎಂಬ ಅರ್ಥ ನೀತಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ ಎಂದು ಸುನಿಲ್‌ಕುಮಾರ್ ಸಲಹೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!