ಮಾನವೀಯತೆಯೇ ಶ್ರೇಷ್ಠ ಧರ್ಮ- ಜಿಲ್ಲಾಧಿಕಾರಿ ಕೂರ್ಮರಾವ್
ಉಡುಪಿ: ಸಮಾಜದಲ್ಲಿ ಬದುಕುವ ಪ್ರತಿಯೋರ್ವನೂ ‘ಮೊದಲು ಮಾನವನಾಗು’ವತ್ತ ಕಾರ್ಯಪ್ರವೃತ್ತನಾದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ತಿಳಿಸಿದರು. ಅವರು ಯುವ ವಿದ್ಯಾರ್ಥಿ ಸಂಚಲನ, ಉಡುಪಿ ಧರ್ಮಕ್ಷೇತ್ರ ಹಾಗೂ ನೆಹರೂ ಯುವಕೇಂದ್ರ ಸಂಘಟನೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾದ ‘ಉಡುಪಿ ಜಿಲ್ಲಾ ಮಟ್ಟದ ಯುವ ವಿದ್ಯಾರ್ಥಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನದ ಪೂರ್ವಭಾಗಿಯಾಗಿ ಸುಮಾರು 30 ಶಾಲೆಗಳಲ್ಲಿ ಏರ್ಪಡಿಸಲಾದ ಭಾಷಣ ಹಾಗೂ ಪ್ರಂಬಂಧ ಸ್ಪರ್ಧೆಯ ವಿಷಯಗಳನ್ನುದ್ದೇಶಿಸಿ ಮಾತನಾಡಿದ ಅವರು “ಮನುಷ್ಯನು ಸದಾ ಕ್ರಿಯಾಶೀಲನಾಗಿರಲು ಬಯಸುತ್ತಾನೆ. ಯಾವುದಾದರೂ ಚಟುವಟಿಕೆಯಲ್ಲಿ ತನ್ನನ್ನೇ ತಾನು ತೊಡಗಿಸಿಕೊಳ್ಳುತ್ತಾನೆ. ಇದು ಮನುಷ್ಯರಲ್ಲಿ ಅಂತರ್ಗತವಾಗಿರುವ ಗುಣ. ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಸಮಯವನ್ನು ಸದುಪಯೋಗಪಡಿಸಲು ಈ ಪಂಚಸೂತ್ರಗಳನ್ನು ಗಮನಿಸಬೇಕು. ಶಾಲೆಯಲ್ಲಿ ಪಠ್ಯದೊಂದಿಗೆ ಕ್ರೀಡಾಲಯ ಹಾಗೂ ಗ್ರಂಥಾಲಯಗಳನ್ನು ಸಮರ್ಪಕವಾಗಿ ಬಳಸಬೇಕು.
ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಜೀವನದಲ್ಲಿ ಉನ್ನತ ಗುರಿ ಹೊಂದಿರಬೇಕು ಆಗ ನಮ್ಮ ಸಂಪೂರ್ಣ ಶಕ್ತಿಯನ್ನು ಸಮರ್ಪಕವಾಗಿ ಬಳಸಿ ಯಾವುದೇ ತಪ್ಪುದಾರಿಯನ್ನು ಹಿಡಯದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸ ಬೇಕು” ಎಂದರು. ಸಂದೇಶದ ಕೊನೆಯೆಲ್ಲಿ “ಯುವವಿದ್ಯಾರ್ಥಿಗಳು ಬೆಳೆಯುತ್ತಿದ್ದಂತೆ ತಮ್ಮಲ್ಲಿರುವ ರಚನಾತ್ಮಕ ಅಭಿವ್ಯಕ್ತಿಯನ್ನು ಕುಗ್ಗಲು ಬಿಡದೆ ಅದನ್ನು ವೃದ್ಧಿಸುವಲ್ಲಿ ಗಮನಹರಿಸಬೇಕು. ಮುಂದಿನ ಕೆಲವು ದಿನಗಳೊಳಗೆ ನೀವು ಭೇಟಿಮಾಡಿರುವ ಯಾವುದಾದರೂ ಪ್ರೇಕ್ಷಣೀಯ ಸ್ಥಳದ ಕುರಿತು ಚಿತ್ರ ಅಥವ ಕವನಗಳನ್ನು ರಚಿಸುವ ಮೂಲಕ ನಿಮ್ಮನ್ನೇ ವ್ಯಕ್ತಪಡಿಸಲು ಪ್ರಯತ್ನಿಸಬೇಕು” ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಉಡುಪಿ ಜಿಲ್ಲಾ ನೆಹರೂ ಯುವಕೇಂದ್ರ ಸಂಘಟನೆಯ ಯುವಜನ ಅಧಿಕಾರಿಗಳಾದ ವಿಲ್ಫ್ರೆಡ್ ಡಿ’ಸೋಜರವರು “ಸ್ವಾಮಿ ವಿವೇಕಾನಂದರ ಜಯಂತಿಯನ್ನು ಸಪ್ತಾಹದಲ್ಲಿ ನಾವಿರುವಾಗ ಅವರ ಆದರ್ಶಗಳನ್ನು ಯುವವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಪ್ರಧಾನ ಮಂತ್ರಿಗಳು ಉಲ್ಲೇಖಿಸಿದಂತೆ ಈ ಶತಮಾನವು ಭಾರತದ ಯುವಜನರ ಪಾಲಿಗೆ ಉತ್ತಮ ಭವಿಷ್ಯವನ್ನು ನೀಡುವಂತಹದ್ದಾಗಿದೆ ಎಂದರು”
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೊರವರು “ಯುವ ವಿದ್ಯಾರ್ಥಿ ಸಂಚಲನದ ಮೂಲಕ ವಿದ್ಯಾರ್ಥಿಗಳು ನವ ಸಮಾಜದ ನಿರ್ಮಾಣದೆಡೆಗೆ ಹೆಜ್ಜೆ ಹಾಕಬೇಕು. ಇದಕ್ಕಿರುವ ದಾರಿ ಸ್ವಪರಿವರ್ತನೆಯಿಂದ ಸಮಾಜದ ಪರಿವರ್ತನೆ. ಸಂಚಲನದ ಕಾರ್ಯವಿಧಾನವಾದ ವೀಕ್ಷಿಸು, ವಿಮರ್ಷಿಸು ಕಾರ್ಯಪ್ರವೃತ್ತಾನಾಗು ಇದರ ಮೂಲಕ ವಿದ್ಯಾರ್ಥಿಗಳ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗಬೇಕು. ಸಂಚಲನದ ಪಂಚಧ್ಯೇಯಗಳಾದ ಶಾಂತಿಯಿಂದ ಬಾಳುವುದು ಹಾಗೂ ಶಾಂತಿಗಾಗಿ ಪ್ರಯತ್ನಿಸುವುದು, ಸಣ್ಣ-ಪುಟ್ಟ ತ್ಯಾಗಗಳ ಮೂಲಕ ಒಳ್ಳೆಯ ಕೆಲಸಗಳನ್ನು ಮಾಡಿ ಕಷ್ಟದಲ್ಲಿರುವವರಿಗೆ ಸಹಾಯಮಾಡುವುದು, ತಂದೆ-ತಾಯಿ, ಗುರು-ಹಿರಿಯರು ಹಾಗೂ ಎಲ್ಲಾ ಮಾನವರನ್ನು ಗೌರವಿಸುವುದು ಮತ್ತು ಪರಿಸರವನ್ನು ಸಂರಕ್ಷಿಸಿ ಅದನ್ನು ಅಭಿವೃದ್ಧಿಗೊಳಸಲು ಪ್ರತಿದಿನ ಪ್ರಯತ್ನಿಸಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ಏರ್ಪಡಿಸಲಾದ “ಸಮಾಜದಲ್ಲಿ ಶಾಂತಿಯುತ ಸಹಜೀವನ” ಸಂವಾದ ಕಾರ್ಯಕ್ರಮದಲ್ಲಿ ಯುವವಿದ್ಯಾರ್ಥಿಗಳೊಡನೆ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಕೈ ಅಕ್ಷಯ್ ಮಚ್ಚೀಂದ್ರರವರು “ಸಮಾಜದಲ್ಲಿ ಶಾಂತಿ ನೆಲೆಗೊಳಿಸಲು ಮೂರು ಆಯಾಮಗಳಲ್ಲಿ ನಾವೆಲ್ಲರೂ ಶ್ರಮಿಸಬೇಕು. ಮೊದಲನೆಯದಾಗಿ ನಾವು ವೈಯುಕ್ತಿಕವಾಗಿ ಶಾಂತಿ ಜೀವಿಗಳಾಗಬೇಕು, ನಂತರ ನಮ್ಮ ಕುಟುಂಬ, ನೆರೆಹೊರೆ ಹಾಗೂ ಸಮಾಜದಲ್ಲಿ ಇತರರೊಡನೆ ಶಾಂತಿಯಿಂದರಬೇಕು ಹಾಗೂ ಮೂರನೆಯದಾಗಿ ನಾವು ಪರಿಸರದೊಂದಿಗೆ ಶಾಂತಿ-ಸಮನ್ವಯತೆಯಲ್ಲಿರಬೇಕೆಂದರು.” ಸಂವಾದದಲ್ಲಿ ಸಮಾಜದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಪೊಲೀಸ್ ವ್ಯವಸ್ಥೆಯ ಪಾತ್ರ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯುವ ಸುಳ್ಳುಸುದ್ದಿಗಳು, ವಿದ್ಯಾರ್ಥಿಗಳು ಸೈಬರ್ ಅಪರಾಧಗಳಿಗೆ ಬಲಿಯಾಗುವುದು, ವಿದ್ಯಾಭ್ಯಾಸದಲ್ಲಿ ಒತ್ತಡ ಅನುಭವಿಸುವುದು ಹೀಗೆ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ ಅವರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಉಡುಪಿ ಕೆಥೋಲಿಕ್ ಎಜ್ಯುಕೇಶನ್ ಸೊಸೈಟಿ ಇದರ ಕಾರ್ಯದರ್ಶಿಗಳಾದ ಫಾದರ್ ವಿನ್ಸೆಂಟ್ ಕ್ರಾಸ್ತ, ವೈ.ಎಸ್.ಎಮ್ ಮಾಜಿ ಅಂತರಾಷ್ಟ್ರೀಯ ನಿರ್ದೇಶಕರಾದ ಫಾದರ್ ಚಾರ್ಲ್ಸ್ ಮಿನೇಜಸ್, ವೈ.ಎಸ್.ಎಮ್ ಉಡುಪಿ ಧರ್ಮಕ್ಷೇತ್ರದ ನಿರ್ದೇಶಕರಾದ ಫಾದರ್ ಸ್ಟೀವನ್ ಫೆರ್ನಾಂಡಿಸ್, ಯುವಜನ ಸಂಯೋಜಕರಾದ ಡೆರಿಕ್ ಮಸ್ಕರೇನ್ಹಸ್, ಸಚೇತಕರಾದ ಲವಿನಾ ಡಿ;ಸೋಜ, ವೈ.ಎಸ್.ಎಮ್ ಅಧ್ಯಕ್ಷರಾದ ಕು| ಮೆಲ್ಡ್ರಿಯಾ ನೊರೊನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು| ಮಾನ್ವಿ ವಿ. ಅಮೀನ್ ನಿರೂಪಿಸಿ, ಕು| ಮರಿಯಾ ವಿಯೋಲಾ ಬಾರೆಟ್ಟೊ ವಂದಿಸಿದರು. ಅಪರಾಹ್ನ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.