ಸಂತೆಕಟ್ಟೆ: 21.26 ಕೋಟಿ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣ- ಕೇಂದ್ರ ಸಚಿವೆ ಶೋಭಾ
ಉಡುಪಿ, ಜ.12: ಉಡುಪಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆಯಲ್ಲಿ ವಾಹನ ದಟ್ಟಣೆ ಮತ್ತು ಅಪಘಾತಗಳನ್ನು ತಪ್ಪಿಸಲು ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ 21.26 ಕೋಟಿ ವೆಚ್ಚದಲ್ಲಿ ಓವರ್
ಪಾಸ್ ನಿರ್ಮಾಣ ಮಾಡಲಾಗುತ್ತಿದ್ದು,ಅತ್ಯಂತ ತ್ವರಿತಗತಿಯಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.
ಅವರು ಇಂದು ನಗರದ ಸಂತೆಕಟ್ಟೆ ಜಂಕ್ಷನ್ ನಲ್ಲಿ ಓವರ್ ಪಾಸ್ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ
ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಂತೆಕಟ್ಟೆ ಜಂಕ್ಷನ್ ಅತ್ಯಂತ ವಾಹನ ದಟ್ಟಣೆಯಿಂದ ಕೂಡಿದ್ದು ಪ್ರತಿ ದಿನ 4500 ಕ್ಕೂ ಅಧಿಕ ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ಇದು ಪ್ರಮುಖ ಬ್ಲಾಕ್ ಸ್ಪಾಟ್ ಆಗಿ ಗುರುತಿಸಲಗಿದೆ. ಈ ಭಾಗದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಓವರ್ ಪಾಸ್ ನಿರ್ಮಾಣ ಅತೀ ಅವಶ್ಯಕವಾಗಿದ್ದು, ಹಲವು ವರ್ಷಗಳಿಂದ ಇದು ಸಾರ್ವಜನಿಕರ ಪ್ರಮುಖ ಬೇಡಿಕೆಯೂ ಆಗಿದೆ. ಈ ಕಾಮಗಾರಿಯನ್ನು ದಿನದಲ್ಲಿ 3 ಪಾಳಿಯಂತೆ ಕಾರ್ಯ ನಿರ್ವಹಿಸಿ ತ್ವರಿತಗತಿಯಲ್ಲಿ ಮುಕ್ತಾಯಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ರಾ. ಹೆದ್ದಾರಿಯ ಅಂಬಲಪಾಡಿಯಲ್ಲಿ ಸಹ 22 ಕೋಟಿ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣ ಕೈಗೊಳ್ಳಲಾಗುವುದು ಎಂದ ಸಚಿವರು, ಸಂತೆಕಟ್ಟೆಯಲ್ಲಿ ಕಾಮಗಾರಿ ಮುಕ್ತಾಯವಾಗುವವರೆಗೂ ವಾಹನಗಳ ಸಂಚಾರಕ್ಕೆ ತೊಂದರೆ ಯಾಗದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಾಭಿವೃಧಿ ಪ್ರಾಧಿಕಾರಿದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ, ನಗರಸಭಾ ಉಪಾಧ್ಯಕ್ಷೆ ಲಕ್ಷ್ಮಿಮಂಜುನಾಥ್, ಸದಸ್ಯೆ ಮಂಜುಳಾ, ದಿನೇಶ್ ಪೈ ಹಾಗೂ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.