ಸಿಲಿಂಡರ್ ಸ್ಪೋಟ-ಎರಡು ಮಕ್ಕಳ ಸಹಿತ ಒಂದೇ ಕುಟುಂಬದ ಆರು ಜನ ಮೃತ್ಯು
(ಉಡುಪಿ ಟೈಮ್ಸ್ ವರದಿ) ಅಡುಗೆ ಅನಿಲದ ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ಆರು ಸದಸ್ಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಂಡೀಗಢದ ಪಾಣಿಪತ್ ಜಿಲ್ಲೆಯ ಬಿಚ್ಪರಿ ಗ್ರಾಮದ ಬಳಿಯ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ನಡೆದಿದೆ.
ಅವಘಡದಲ್ಲಿ ಅಬ್ದುಲ್ (45), ಅವರ 40 ವರ್ಷದ ಪತ್ನಿ, 18 ಮತ್ತು 16 ವರ್ಷದ ಇಬ್ಬರು ಪುತ್ರಿಯರು ಮತ್ತು 12 ಮತ್ತು 10 ವರ್ಷದ ಇಬ್ಬರು ಪುತ್ರರು ಮೃತಪಟ್ಟಿದ್ದಾರೆ.
ನಗರದ ಜನವಸತಿ ಪ್ರದೇಶದಲ್ಲಿ ವಾಸವಿದ್ದ ಕುಟುಂಬ ಪಶ್ಚಿಮ ಬಂಗಾಳದಿಂದ ವಲಸೆ ಬಂದಿತ್ತು. ದಂಪತಿ ಪಾಣಿಪತ್ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವಷ್ಟರಲ್ಲಿ 6 ಮಂದಿ ಸಜೀವ ದಹನವಾಗಿದ್ದಾರೆ ಎಂದು ತಿಳಿದು ಬಂದಿದೆ.