ಬೈಂದೂರು: ನಿಂತಿದ್ದ ದ್ವಿಚಕ್ರ ವಾಹನಕ್ಕೆ ಬೈಕ್ ಡಿಕ್ಕಿ- ಸವಾರ ಮೃತ್ಯು
ಬೈಂದೂರು ಜ.12(ಉಡುಪಿ ಟೈಮ್ಸ್ ವರದಿ): ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಬೈಂದೂರಿನ ಕಿರಿಮಂಜೇಶ್ವರ ಗ್ರಾಮದ ನಾಗೂರು ಮಸೀದಿಯ ಬಳಿ ನಡೆದಿದೆ.
ಅಣ್ಣಪ್ಪ ಪೂಜಾರಿ ಮೃತಪಟ್ಟವರು. ಇವರು ನಿನ್ನೆ ಮಧ್ಯಾಹ್ನದ ವೇಳೆ ಉಪ್ರಳ್ಳಿ ಕಡೆಗೆ ಹೋಗಲು ರಸ್ತೆ ಬದಿಯಲ್ಲಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ನಿಂತುಕೊಂಡಿರುವಾಗ ಕಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಸವಾರ ಗಣೇಶ್ ಆಚಾರ್ ಎಂಬಾತ ರಸ್ತೆಯ ಅಂಚಿನಲ್ಲಿ ನಿಲ್ಲಿಸಿಕೊಂಡಿದ್ದ ಅಣ್ಣಪ್ಪ ಪೂಜಾರಿ ರವರ ದ್ವಿಚಕ್ರ ವಾಹನ ಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಎರಡು ದ್ವಿಚಕ್ರ ವಾಹನ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ತಲೆಗೆ ಗಾಯಗೊಂಡ ಅಣ್ಣಪ್ಪ ಪೂಜಾರಿರವರನ್ನು ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಣ್ಣಪ್ಪ ಪೂಜಾರಿಯವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಭಾಕರ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.