ವಿಶ್ವದ ಪ್ರಭಾವಶಾಲೀ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ ಭಾರತ 85ನೇ ಸ್ಥಾನ
ಲಂಡನ್, ಜ.12: ವಿಶ್ವದ ಅತ್ಯಂತ ಪ್ರಭಾವಶಾಲೀ ಪಾಸ್‌ಪೋರ್ಟ್‌ಗಳ ಶ್ರೇಯಾಂಕದಲ್ಲಿ ಭಾರತ 85 ನೇ ಸ್ಥಾನ ಪಡೆದುಕೊಂಡಿದೆ.
ಹೆನ್ಲೆ ಪಾಸ್‌ಪೋರ್ಟ್ ಇಂಡೆಕ್ಸ್ 2023 ವರದಿ ಪ್ರಕಾರ ಅಂತರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ(ಐಎಟಿಎ) ಅಂಕಿಅಂಶ ಆಧರಿಸಿ ಈ ಶ್ರೇಯಾಂಕ ಪಟ್ಟಿ ಸಿದ್ಧಪಡಿಸಲಾಗಿದೆ. ಪೂರ್ವವೀಸಾ ಇಲ್ಲದೆಯೇ ಭೇಟಿ ನೀಡಬಹುದಾದ ಸ್ಥಳಗಳನ್ನು ಆಧರಿಸಿ ಈ ಶ್ರೇಯಾಂಕ ಪಟ್ಟಿ ತಯಾರಿಸಲಾಗಿದೆ. ಅದರಂತೆ ಜಪಾನ್‌ನ ಪಾಸ್‌ಪೋರ್ಟ್ ಸತತ 5ನೇ ಬಾರಿಗೆ ಅಗ್ರಸ್ಥಾನ ಪಡೆದಿದೆ. ಭಾರತದ ಪಾಸ್‌ಪೋರ್ಟ್ ಶ್ರೇಯಾಂಕದಲ್ಲಿ 85ನೇ ಸ್ಥಾನ ಪಡೆದಿದೆ. ಜಪಾನ್‌ನ ಪಾಸ್‌ಪೋರ್ಟ್ ಹೊಂದಿರುವವರು 193 ಜಾಗತಿಕ ತಾಣಗಳಿಗೆ ಮುಕ್ತವಾಗಿ ಭೇಟಿ ನೀಡಬಹುದಾಗಿದೆ. ಭಾರತದ ಪಾಸ್‌ಪೋರ್ಟ್ ಹೊಂದಿರುವವರು 59 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ.
ವರದಿ ಪ್ರಕಾರ ಜಪಾನ್ ಪ್ರಥಮ, ಸಿಂಗಾಪುರ, ದಕ್ಷಿಣ ಕೊರಿಯಾ- ದ್ವಿತೀಯ, ಜರ್ಮನಿ, ಸ್ಪೇನ್-ತೃತೀಯ, ಫಿನ್ಲ್ಯಾಂಡ್, ಇಟಲಿ, ಲುಕ್ಸೆಂಬರ್ಗ್-4ನೇ ಸ್ಥಾನ ಮತ್ತು ಆಸ್ಟ್ರಿಯಾ, ಡೆನ್ಮಾರ್ಕ್, ನೆದರ್‌ಲ್ಯಾಂಡ್ ದೇಶಗಳ ಪಾಸ್‌ಪೋರ್ಟ್ 5ನೇ ಸ್ಥಾನ ಪಡೆದಿವೆ. ಫ್ರಾನ್ಸ್, ಐರ್‌ಲ್ಯಾಂಡ್, ಪೋರ್ಚುಗಲ್, ಬ್ರಿಟನ್ ಜಂಟಿಯಾಗಿ 6ನೇ ಸ್ಥಾನ, ಬೆಲ್ಜಿಯಂ, ಜೆಕ್ ಗಣರಾಜ್ಯ, ಅಮೆರಿಕ, ಸ್ವಿಝರ್‌ಲ್ಯಾಂಡ್, ನ್ಯೂಝಿಲ್ಯಾಂಡ್ ಮತ್ತು ನಾರ್ವೆ ಜಂಟಿಯಾಗಿ 7ನೇ ಸ್ಥಾನದಲ್ಲಿವೆ.
ಪಟ್ಟಿಯಲ್ಲಿ ಅಂತಿಮ ಸ್ಥಾನ(109)ದಲ್ಲಿ ಅಫ್ಘಾನಿಸ್ತಾನದ ಪಾಸ್‌ಪೋರ್ಟ್ ಇದ್ದರೆ, 108ನೇ ಶ್ರೇಯಾಂಕದಲ್ಲಿ ಇರಾಕ್, ಸಿರಿಯಾ 107, ಪಾಕಿಸ್ತಾನ 106, ಯೆಮನ್ 105, ಸೊಮಾಲಿಯಾ 104, ನೇಪಾಲ, ಫೆಲೆಸ್ತೀನ್ ಅಥಾರಿಟಿ 103, ಉತ್ತರ ಕೊರಿಯಾ 102, ಬಾಂಗ್ಲಾದೇಶ 101, ಕಾಂಗೊ ಗಣರಾಜ್ಯ, ಲೆಬನಾನ್, ಶ್ರೀಲಂಕಾ ಮತ್ತು ಸುಡಾನ್ 100ನೇ ಶ್ರೇಯಾಂಕ ಪಡೆದಿವೆ ಎಂದು ತಿಳಿದು ಬಂದಿದೆ.